ಬೆಂಗಳೂರು: ಪುಂಡರ ಗುಂಪೊಂದು ಬೇಕರಿ ಹುಡುಗರ ಮೇಲೆ ಏಕಾಏಕಿ ಹಲ್ಲೆ ಮಾಡಿರೋ ಘಟನೆ ಹೆಚ್.ಎ.ಎಲ್ ಕುಂದನಹಳ್ಳಿ ಬಳಿ ಇತ್ತೀಚೆಗೆ ನಡೆದಿತ್ತು.

ಪುಂಡರ ಗುಂಪೊಂದು ಬೇಕರಿಗೆ ಸಿಗರೇಟ್ ಕೇಳೋ ನೆಪದಲ್ಲಿ ಬಂದು ಏಕಾಏಕಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದರು. ಜೊತೆಗೆ ಬೇಕರಿಯನ್ನು ಸಹ ಧ್ವಂಸಗೊಳಿಸಿದ್ದರು. ಊರು ಬಿಟ್ಟು ಊರಿಗೆ ಬಂದು ನಮಗೆ ಆವಾಜ್ ಹಾಕ್ತಿರಾ ಎಂದು ಹೆಲ್ಮೆಟ್ ನಿಂದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರಿಗೆ
ಮನಬಂದಂತೆ ಥಳಿಸಿದ್ದರು.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದಾಗ ಹಿಂದಿನ ಸತ್ಯ ಬಯಲಾಗಿದೆ. ಅಷ್ಟಕ್ಕೂ ಈ ಗಲಾಟೆಯ ಮುಖ್ಯ ಆರೋಪಿ ಬೇಕರಿ ಪಕ್ಕದ ಟೀ ಅಂಗಡಿ ಮಾಲೀಕ, ಟೀ ಅಂಗಡಿ ಮಾಲೀಕನ ಕುಮ್ಮಕ್ಕಿನಿಂದ ಬೇಕರಿ ಹುಡುಗರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಬೇಕರಿ ಎದುರುಗಡೆ ಮಂಜುನಾಥ್ ಎಂಬುವವರು ಟೀ ಅಂಗಡಿ ಇಟ್ಟಿದ್ದರು. ಆದರೆ ಮಂಜುನಾಥ್ ಟೀ ಅಂಗಡಿಯಲ್ಲಿ ಅಷ್ಟಾಗಿ ವ್ಯಾಪಾರ ಆಗುತ್ತಿರಲಿಲ್ಲ. ವ್ಯಾಪಾರದ ಬಗ್ಗೆ ಆಗಾಗ ತನ್ನ ಏರಿಯಾದ ಹುಡುಗರಿಗೆ ಹೇಳಿ ಗಲಾಟೆ ಮಾಡುತ್ತಿದ್ದನಂತೆ. ಹೀಗಾಗಿ ರಾತ್ರಿ ಟೀ ಕುಡಿಯುವ ನೆಪದಲ್ಲಿ ಬೇಕರಿಗೆ ಹೋಗಿ ಯುವಕರ ಮೇಲೆ ಹಲ್ಲೆ ಮಾಡಿಸಿದ್ದಾನೆ. ಸದ್ಯ ಆರೋಪಿ ಮಾಲೀಕನನ್ನು ಹಾಗೂ ನಾಲ್ವರನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಗಲಾಟೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.



























