ಬೆಳ್ತಂಗಡಿ : ತಾಲೂಕು ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ-1 ಸಮೀಪದ ಸೊರಕ್ಯ ಎಂಬಲ್ಲಿ ರಬ್ಬರ್ ತೋಟದ ಅಂಚಿನಲ್ಲಿರುವ ಕಣಿಯೊಂದರಲ್ಲಿ ಭಾಗಶಃ ಸುಟ್ಟು ಹೋದ ಸ್ಥಿತಿಯಲ್ಲಿ ಮೃತದೇಹವೊಂದು ಡಿ.12 ರಂದು ಪತ್ತೆಯಾಗಿದೆ.
ಲಾಯಿಲ ಕೊಲ್ಲಿ ರಸ್ತೆಯಿಂದ ಸಾಗುವಾಗ ಕೇಲ್ತಜೆಯಿಂದ ಸುರ್ಯ ರಸ್ತೆ ಸಾಗುವ 1 ಕಿ.ಮೀ. ದೂರದಲ್ಲಿರುವ ರಬ್ಬರ್ ತೋಟದ ಮಾಲಕರು ಮೇವಿಗಾಗಿ ದನ ಕಟ್ಟಲು ಕಾಡಿಗೆ ತೆರಳುವ ವೇಳೆ ದುರ್ನಾತ ಬೀರುವುದನ್ನು ಕಂಡು ಪರಿಶೀಲಿಸಿದಾಗ, ಕಣಿವೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ನಂದ ಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.
ದೇಹವು ಶೇ.90 ರಷ್ಟು ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿಲ್ಲ. ಸುಟ್ಟ ದೇಹದ ಮೇಲೆ ಕಟ್ಟಿಗೆ ರಾಶಿ ಹಾಕಿ ಮುಚ್ಚಲಾಗಿದೆ. ಸ್ಥಳದಲ್ಲಿ ಪೊಲೀಸರು ಪರಿಶೀಲಿಸಿದಾಗ ಸುಮಾರು 10 ದಿನಗಳ ಹಿಂದೆ ಕೃತ್ಯ ನಡೆದಿರುವ ಸಾಧ್ಯತೆ ಕಂಡುಬಂದಿದ್ದು, ಸ್ಥಳದಲ್ಲಿ ಕಾಲುಂಗುರ ಪತ್ತೆಯಾಗಿದೆ. ಈ ಆಧಾರದಲ್ಲಿ ಮಹಿಳೆ ಮೃತದೇಹವಿರಬಹುದು ಎಂದು ಸಂಶಯಿಸಲಾಗಿದೆ.
ಮೇಲ್ನೋಟಕ್ಕೆ ಇದೊಂದು ಉದ್ದೇಶಿತ ಕೊಲೆಯಂತೆ ಕಂಡುಬಂದಿದ್ದು, ಪೊಲೀಸ್ ತನಿಖೆಯಿಂದ ಸ್ಪಷ್ಟ ಚಿತ್ರಣ ಸಿಗಬೇಕಿದೆ.
ಸ್ಥಳೀಯ ಠಾಣೆಯಲ್ಲಿ ಮಹಿಳೆ ನಾಪತ್ತೆ ದೂರು ದಾಖಲಾಗಿರುವುದನ್ನು ಪರಿಶೀಲಿಸಿದ್ದಾರೆ. ಗ್ರಾಮಸ್ಥರಿಂದಲೂ ಮಾಹಿತಿ ಕಲೆ ಹಾಕಲಾಗಿದೆ. ನಿರ್ಜನ ಪ್ರದೇಶವಾದ್ದರಿಂದ ಬೇರೆಡೆಯಿಂದ ಮಹಿಳೆಯನ್ನು ಕೊಲೆಗೈದು ತಂದು ಸುಟ್ಟು ಹಾಕಲಾಗಿದೆಯೋ ಎನ್ನುವ ಬಗ್ಗೆಯೂ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ..



























