ವಿಟ್ಲ : ವ್ಯಕ್ತಿಯೋರ್ವರಿಗೆ ಪರಿಚಯದ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದು, ಹಾಗೆಯೇ ಸ್ಥಳೀಯ ಖಾಸಗಿ ಮಾಧ್ಯಮವೊಂದು ಈ ಬಗ್ಗೆ ಮಾನಹಾನಿಕರವಾದ ಸುಳ್ಳು ವಿಚಾರ ಗಳನ್ನು ಬಿತ್ತರಿಸಿರುವುದಾಗಿ ಆರೋಪಿಸಿ ವಿಟ್ಲ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ ವಿಟ್ಲ ಎಂಬವರು ತೇಜಸ್ ಗೌಡ, ಕೃಷ್ಣ ಮುಧೂರು ಹಾಗೂ ಸ್ಥಳೀಯ ಖಾಸಗಿ ಮಾಧ್ಯಮದ ವಿರುದ್ಧ ದೂರು ನೀಡಿದ್ದಾರೆ.
ಶ್ರೀಕೃಷ್ಣ ರವರು ಈ ವರ್ಷದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಅರುಣ್ ಪುತ್ತಿಲ ರವರ ಬಣದಲ್ಲಿ ಗುರುತಿಸಿಕೊಂಡಿದ್ದು, ಅವರ ಪರವಾಗಿ ವಿಟ್ಲದಲ್ಲಿ ಮತಯಾಚನೆಯಲ್ಲಿ ಸಕ್ರಿಯವಾಗಿದ್ದು, ಪರಿಚಯದ ತೇಜಸ್ ಗೌಡ ಎಂಬವರು ಇದರಿಂದ ಕೋಪಗೊಂಡಿದ್ದು, ಸ್ಥಳೀಯರಾದ ಕೃಷ್ಣ ಮುಧೂರು ಎಂಬವರೊಂದಿಗೆ ಸೇರಿಕೊಂಡು ಒಳಸಂಚನ್ನು ರೂಪಿಸಿದ್ದು, ಇಂದು ಬೆಳಿಗ್ಗೆ ಅಂಗಡಿಯಲ್ಲಿದ್ದ ವೇಳೆ ಶ್ರೀಕೃಷ್ಣ ರವರ ಬಳಿಗೆ ತೇಜಸ್ ಎಂಬವರು ಬಂದು ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ, ‘ನೀನು ಪುತ್ತಿಲರ ಪರ ಭಾರೀ ಮತಯಾಚನೆಯನ್ನು ಮಾಡುತ್ತೀಯಾ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ನಿನ್ನನ್ನು ನೋಡಿಕೊಳ್ಳುತ್ತೇನೆ.., ನಿನ್ನ ಬಗ್ಗೆ ಟಿವಿ ಮಾಧ್ಯಮದಲ್ಲಿ ಸುಳ್ಳು ವರದಿಯನ್ನು ಬಿತ್ತರಿಸಿ ಮಾನಹಾನಿ ಮಾಡುತ್ತೇನೆ ಎಂದು ಹೇಳಿ ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿರುತ್ತಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೃಷ್ಣ ಮುಧೂರು ಎಂಬವರು ಯಾವುದೇ ದಾಖಲೆಗಳಿಲ್ಲದೆ ಸ್ಥಳೀಯ ಖಾಸಗಿ ಮಾಧ್ಯಮದಲ್ಲಿ ಬಿತ್ತರಿಸಿರುವ ಫೋಟೊ ಸಹಿತ ಸುಳ್ಳು ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಇದನ್ನು ಕಂಡು ನಾನು ದಿಗ್ಬ್ರಮೆಗೊಂಡಿದ್ದು, ಮಾನಸಿಕವಾಗಿ ನೊಂದಿರುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿರುವ ತೇಜಸ್ ಗೌಡ, ಕುಮ್ಮಕ್ಕು ನೀಡಿರುವ ಕೃಷ್ಣ ಮುಧೂರು, ಸುಳ್ಳು ವರದಿ ಮಾಡಿದ ಸ್ಥಳೀಯ ಖಾಸಗಿ ಮಾಧ್ಯಮದ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮದಲ್ಲಿ ಮಹಿಳೆಗೆ ಕಿರುಕುಳ ಈ ಹಿನ್ನೆಲೆ ಪತಿಯಿಂದ ಹಲ್ಲೆ ಎಂದೆಲ್ಲಾ ಬರೆಯಲಾಗಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಮಹಿಳೆಯರನ್ನು ಅಪಾರವಾಗಿ ಗೌರವಿಸುವ ಸಂಸ್ಕಾರವನ್ನು ಹೊಂದಿದ್ದು, ಮಹಿಳೆಗೆ ಕಿರುಕುಳ ನೀಡುವಷ್ಟು ಹೀನ ಮನಸ್ಥಿತಿಯನ್ನು ಹೊಂದಿಲ್ಲ. ಮಹಿಳೆಗೆ ಕಿರುಕುಳ ನೀಡಿರುವ ವಿಚಾರ ಸತ್ಯಕ್ಕೆ ದೂರವಾದ ಮಾತಾಗಿದೆ ಎಂದು ಶ್ರೀಕೃಷ್ಣ ರವರು ತಿಳಿಸಿದ್ದಾರೆ.

























