ಕಡಬ : ನಿನ್ನೆ ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಮೆಸ್ಕಾಂಗೆ ಅಂದಾಜು 15 ರಿಂದ 20 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಸಿಲಿನಿಂದ ಕಂಗೆಟ್ಟಿದ್ದ ವೇಳೆ ನಿನ್ನೆ ಸಂಜೆ ಏಕಾಏಕಿ ಗುಡುಗು, ಗಾಳಿಯೊಂದಿಗೆ ಭಾರೀ ಮಳೆ ಸುರಿದಿದ್ದು, ಮಳೆಯ ಅಬ್ಬರ ಜೊತೆ ಗಾಳಿ ಸೇರಿಕೊಂಡು ಅಪಾರ ಹಾನಿ ಮಾಡಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ಮರ ಮುರಿದು ಬಿದ್ದು, ಬಸ್ ತಂಗುದಾಣ, 63kva ವಿದ್ಯುತ್ ಪರಿವರ್ತಕ ಸೇರಿದಂತೆ ಹಲವಾರು ವಿದ್ಯುತ್ ಕಂಬಗಳು, ತಂತಿಗಳು ನೆಲಕ್ಕುರುಳಿವೆ. ರಾಷ್ಟ್ರೀಯ ಹೆದ್ದಾರಿ ಸಂಚಾರವು ಸುಮಾರು ಒಂದು ಗಂಟೆಗಳ ಕಾಲ ಬಂದ್ ಆಗಿತ್ತು.
ಉದನೆ ಸಮೀಪದ ಕಳಪ್ಪಾರು ಮತ್ತು ಶೆರ್ವತಡ್ಕ ಎಂಬಲ್ಲೂ ವಿದ್ಯುತ್ ಕಂಬಗಳು ತಂತಿಗಳು ನೆಲಕ್ಕುರುಳಿವೆ. ಕಡಬ, ಅಲಂಕಾರು, ನೆಲ್ಯಾಡಿ, ಬಿಳಿನೆಲೆ ಮೆಸ್ಕಾಂ ವ್ಯಾಪ್ತಿಯಲ್ಲಿ ಅಂದಾಜು 15 ರಿಂದ 20 ಲಕ್ಷ ರೂಪಾಯಿಗಳ ನಷ್ಟ ಆಗಿರಬಹುದೆಂದು ಕಡಬ ಮೆಸ್ಕಾಂ ಎಇಟಿ ಸಜಿಕುಮಾರ್ ಮಾಹಿತಿ ನೀಡಿದ್ದಾರೆ.


























