ಕಾರವಾರ: ಗೋಕರ್ಣದ ಕಡಲತೀರದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿ ತೂರಾಡುತ್ತಿದ್ದ ಬೆಂಗಳೂರಿನ ಮೂಲದ ಇಬ್ಬರು ಟೆಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಂ.ಎಸ್. ಪವನ್ (28) ಮತ್ತು ರಾಘು ಸೆಲ್ವರಂಗನ್ (30) ಎಂದು ಗುರುತಿಸಲಾಗಿದೆ. ಇವರು ಗೋಕರ್ಣದ ರುದ್ರಪಾದದ ಕರಿಯಪ್ಪನ ಕಟ್ಟೆ ಸಮೀಪದ ಬ್ಲೂ ಪೀನ್ ಬೀಚ್ ಸ್ಟೇಟ್ ರೆಸಾರ್ಟ್ ಎದುರಿನ ಸಮುದ್ರ ತೀರದಲ್ಲಿ ಅಮಲಿನ ಸ್ಥಿತಿಯಲ್ಲಿ ತಿರುಗಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಸಂದೇಹದ ಮೇರೆಗೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(b) ಅಡಿಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

























