ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಶುರುವಾಗಿದೆ. ಸೋಮವಾರ(ಅ.17) ಸಂಜೆ 7 ಗಂಟೆ 21 ನಿಮಿಷಕ್ಕೆ ಮೇಷ ಲಗ್ನದಲ್ಲಿ ಕಾವೇರಿ, ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.
ಜೀವ ನದಿಯನ್ನ ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ತುಲಾ ಮಾಸದ ಮೊದಲ ದಿನ ಅಂದರೆ ತುಲಾ ಸಂಕ್ರಮಣದ ದಿನ ಪ್ರತಿ ವರ್ಷ ಕಾವೇರಿ ಕೊಡಗಿನ ಮಡಿಕೇರಿ ತಾಲೂಕಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಈ ಪವಿತ್ರ ಘಳಿಗೆಯನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಂದು ಸಂಜೆ 7 ಗಂಟೆ 21 ನಿಮಿಷಕ್ಕೆ ತುಲಾ ಲಘ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಈ ಬಾರಿ ಸಂಜೆ ವೇಳೆ ತೀರ್ಥೋದ್ಭವವಾಗುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಬೆಳಗ್ಗೆಯಿಂದಲೇ ನಿತ್ಯ ಪೂಜಾಕ್ರಮಗಳು ನಡೆಯುತ್ತಿದೆ. ಆದ್ರೆ ಸಂಜೆ 4 ಗಂಟೆಯ ಬಳಿಕ ಬ್ರಹ್ಮ ಕುಂಡಿಕೆ ಬಳಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.
ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಯ ಬಳಿಕ ಭಾಗಮಂಡಲದಿಂದ ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಆದ್ರೆ ಭಕ್ತರ ಪ್ರಯಾಣಕ್ಕೆ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರ ನಿಯಂತ್ರಣಕ್ಕೆ ಬ್ಯಾರಿಕೇಡ್ಗಳನ್ನ ಹಾಕಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗುತ್ತಿದೆ. ಭದ್ರತೆಗಾಗಿ ಕೆಎಸ್ಆರ್ಪಿ ಮತ್ತು ಡಿಎಆರ್ ಪೊಲೀಸರನ್ನ ನಿಯೋಜಿಸಲಾಗಿದೆ. ತಲಕಾವೇರಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಭಕ್ತರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ದೇವಸ್ಥಾನ ಸಮಿತಿ ಒಟ್ಟಾಗಿ ಕಾವೇರಿ ಜಾತ್ರೆಯನ್ನು ಯಶಸ್ಸುಗೊಳಿಸಲು ಸಜ್ಜಾಗಿದೆ.


























