ಮಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ನಾನಾ ರೂಪದಲ್ಲಿ ವಂಚಿಸಿ ಹಣ ಗಳಿಸುತ್ತಿರುವ ಖದೀಮರು ಈಗ ಸೈಬರ್ ಪೊಲೀಸರ ಹೆಸರಿನಲ್ಲಿ ವಂಚನೆಗೆ ದಾಳ ಎಸೆದಿದ್ದಾರೆ.
ವಂಚಕರು ಈಗ ಪೊಲೀಸ್ ವೇಷದಲ್ಲಿ ‘ದಂಡ’ ವಸೂಲಿಗೆ ಮುಂದಾಗಿದ್ದಾರೆ. ನೇರವಾಗಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಬಲೆಗೆ ಕೆಡವುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ರೊಂದಿಗಿನ ‘ಚಾಟಿಂಗ್’ (ಸಂಭಾಷಣೆ) ವಿಚಾರ ಮುಂದಿಟ್ಟು ವಂಚಿಸಲಾಗುತ್ತಿದೆ. ಹೆಚ್ಚಾಗಿ ಯುವಜನರನ್ನೇ ಗುರಿ ಮಾಡಲಾಗುತ್ತಿದೆ.
ದಂಡದ ಮೊತ್ತ ಪಾವತಿಸುವವರಿಗೆ ಪೊಲೀಸ್ ಇಲಾಖೆಯದ್ದು ಎಂದು ಬಿಂಬಿಸುವ ನಕಲಿ ರಶೀದಿಯನ್ನು ಕೂಡ ನೀಡಲಾಗುತ್ತದೆ. ಈ ರೀತಿ ಸಂದೇಶ ಕಳುಹಿಸುವವರ ವಾಟ್ಸ್‌ಆ್ಯಪ್ ಅಥವಾ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಪೊಲೀಸ್ ಅಧಿಕಾರಿಗಳ ಪೊಟೋ ಇರುತ್ತದೆ. ಜತೆಗೆ ಸರಕಾರಿ ಅಧಿಕಾರಿ ಎಂದು ಉಲ್ಲೇಖೀಸಲಾಗುತ್ತದೆ ಎಂದು ಸೈಬರ್ ಭದ್ರತಾ ತಜ್ಞರು ಹಾಗೂ ಈ ರೀತಿಯ ಸಂದೇಶಗಳನ್ನು ಸ್ವೀಕರಿಸಿದವರು ತಿಳಿಸಿದ್ದಾರೆ.
ಇನ್ನು ಕೆಲವರಿಗೆ ಪೋರ್ನ್ ವೀಡಿಯೋ (ಅಶ್ಲೀಲ ದೃಶ್ಯಗಳು) ಹೆಸರಿನಲ್ಲಿ ಹೆದರಿಸಿ ಹಣ ಪಡೆಯಲಾಗುತ್ತಿದೆ. “ನೀವು ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ್ದೀರಿ. ನಿಮ್ಮ ವಾಟ್ಸ್ ಆ್ಯಪ್‌ನಲ್ಲಿ ಅಶ್ಲೀಲ ದೃಶ್ಯ ರವಾನೆಯಾಗಿದೆ’ ಎಂಬಿತ್ಯಾದಿ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ “ನಿಮ್ಮ ವಿರುದ್ಧ ಪ್ರಕರಣ ದಾಖಲಾಗುವುದನ್ನು ತಪ್ಪಿಸಬೇಕಾದರೆ ಹಣ ನೀಡಬೇಕು’ ಎಂದು ಹೆದರಿಸಲಾಗುತ್ತದೆ. ಇದು ಕೂಡ ಪೊಲೀಸರ ಹೆಸರಿನಲ್ಲಿ ನಡೆಯುವ ಮೋಸ.
ಈ ರೀತಿಯಾಗಿ ಮೋಸದ ಜಾಲಕ್ಕೆ ಒಡ್ಡುವ ವಂಚಕರು ಹಣ ಪಾವತಿಗೆ ತುರ್ತು ಸ್ಥಿತಿ (ಸೆನ್ಸ್ ಆಫ್ ಅರ್ಜೆನ್ಸಿ) ಸೃಷ್ಟಿ ಮಾಡುತ್ತಾರೆ. “ನೀವು ಈಗಲೇ ದಂಡದ ಮೊತ್ತ ಅಥವಾ ಹಣ ಪಾವತಿಸಿದರೆ ಮೊತ್ತದಲ್ಲಿ ಕಡಿಮೆ ಮಾಡುತ್ತೇವೆ. ವಿಳಂಬವಾದರೆ ಹೆಚ್ಚು ನೀಡಬೇಕಾಗುತ್ತದೆ’ ಎಂದು ಹೇಳುತ್ತಾರೆ. ಹಾಗಾಗಿ ಕೆಲವು ಮಂದಿ ಕೂಡಲೇ ಪಾವತಿಸಲು ಮುಂದಾಗಿ ವಂಚನೆಗೊಳಗಾಗುತ್ತಾರೆ.
ವಂಚಕರು ತಮಗೆ ಸಿಗುವ ಮೊಬೈಲ್ ನಂಬರ್‌ಗಳಿಗೆ ಇಂತಹ ಸಂದೇಶಗಳನ್ನು ಕಳುಹಿಸುತ್ತ ಹೋಗುತ್ತಾರೆ. ಕೆಲವು ಮಂದಿ ಅವರ ಬಲೆಗೆ ಬಿದ್ದರೂ ಉದ್ದೇಶ ಈಡೇರುತ್ತದೆ. ಕೆಲವರು ಹಲವು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿರುತ್ತಾರೆ. ಆಗ ಯಾವುದಾದರೊಂದು ಗ್ರೂಪ್‌ನಿಂದ ಅವರಿಗೆ ಗೊತ್ತಿಲ್ಲದಂತೆಯೇ ಅಶ್ಲೀಲ ಚಿತ್ರ, ವೀಡಿಯೋ ಅವರ ಮೊಬೈಲ್ ಸೇರಿರಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರೆಂದು ಹೇಳಿ ಯಾರಾದರೂ ಕರೆ ಮಾಡಿ “ನಿಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳಿವೆ’ ಎಂದು ಹೆದರಿಸಿದರೆ ಆತಂಕ ಹೆಚ್ಚಾಗಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಸೈಬರ್ ಭದ್ರತಾ ತಜ್ಞರು.

























