ಕೇರಳದಲ್ಲಿ 2021ರಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾದಾಗ ಕರ್ನಾಟಕದ ಜನತೆ ಆತಂಕಕ್ಕೀಡಾಗಿದ್ದರು. ನಮ್ಮ ರಾಜ್ಯಕ್ಕೂ ಬಂದರೇನು ಗತಿ, ಈಗಾಗಲೇ ಕೋವಿಡ್ನಿಂದ ಸಾಕಷ್ಟು ಅನುಭವಿಸಿದ್ದೇವೆ ಎಂದು ಭಯಪಟ್ಟಿದ್ದರು. ಆದರೆ ಝಿಕಾ ವೈರಸ್ ಪ್ರಭಾವ ಆಗ ಹೆಚ್ಚಿರಲಿಲ್ಲ, ಕೇರಳದ ಗಡಿ ದಾಟಿ ಬರಲಿಲ್ಲ, ಆದರೆ ಇದೀಗ ರಾಯಚೂರಿನಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ. 5 ವರ್ಷದ ಬಾಲಕಿಯಲ್ಲಿ ಸೋಂಕು ದೃಢಪಟ್ಟಿದೆ.
ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿ ಕೋಳಿ ಕ್ಯಾಂಪ್‌ನಲ್ಲಿ 5 ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದೆ. ಪುಣೆ ವೈರಾಲಜಿ ಲ್ಯಾಬ್ ವರದಿಯಲ್ಲಿ ಮಗುವಿನಲ್ಲಿ ಝೀಕಾ ಇರೋದು ದೃಢಪಟ್ಟಿದೆ. ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಇನ್ನೂ ಲಭ್ಯವಾಗಿಲ್ಲ. ರಾಯಚೂರು, ಸುತ್ತಮುತ್ತಲ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಅಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮಗುವಿನಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದಂತೆ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಬಾಲಕಿ ಮನೆಗೆ ಆರೋಗ್ಯ ಅಧಿಕಾರಿಗಳ ತಂಡವೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಔಷಧಿ ಸಿಂಪಡಿಸಿ ಬಾಲಕಿ ಮನೆ ಬಳಿ ಇರುವವರ ದ್ರವ ಸಂಗ್ರಹಿಸಿದ್ದಾರೆ. ಗ್ರಾಮದಲ್ಲಿರುವ ಗರ್ಭಿಣಿಯರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ.
ಝೀಕಾ ವೈರಸ್ ಕಾಣಿಸಿಕೊಳ್ಳುವ ಮೊದಲು ಬಾಲಕಿಗೆ ಜ್ವರ ಕಾಣಿಸಿಕೊಂಡಿತ್ತಂತೆ. ಡೇಂಘಿ ಲಕ್ಷಣಗಳು ಕಂಡು ಬಂದು ತಪಾಸಣೆ ಮಾಡಿಸಿದಾಗ ಬಾಲಕಿಯಲ್ಲಿ ಝೀಕಾ ವೈರಸ್ ಇರೋದು ದೃಢಪಟ್ಟಿದೆ.
ಝೀಕಾ ವೈರಸ್ ಲಕ್ಷಣಗಳು..!!
- ಜ್ವರ
- ಮೈ ಮೇಲೆ ಗುಳ್ಳೆಗಳು
- ತಲೆನೋವು
- ಸಂಧು ನೋವು
- ಕೆಂಪು ಕಣ್ಣು
- ಮಾಂಸ ಖಂಡದಲ್ಲಿ ನೋವು
ಡೇಂಜರ್ ಝೀಕಾ ವೈರಸ್.!!
ಏಡೀಸ್ ಸೊಳ್ಳೆಗಳಿಂದ ಝೀಕಾ ವೈರಸ್ ಹರಡುತ್ತದೆ. ಹಗಲು ಹೊತ್ತಲ್ಲೂ ಏಡೀಸ್ ಸೊಳ್ಳೆಗಳು ಕಚ್ಚುತ್ತವೆ. ಝೀಕಾ ವೈರಸ್‌ನ ಲಕ್ಷಣಗಳು ತಕ್ಷಣಕ್ಕೆ ಗೊತ್ತಾಗಲ್ಲ. ಗರ್ಭಿಣಿ ಸ್ತ್ರೀಯರಿಗೆ ಕಚ್ಚಿದ್ರೆ ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಹುಟ್ಟುವ ಮಗುವಿನ ತಲೆ ಸಾಮಾನ್ಯಕ್ಕಿಂತ ಚಿಕ್ಕ ಇರುತ್ತದೆ. ಝೀಕಾ ವೈರಸ್‌ನಿಂದಾಗಿ ಅವಧಿಪೂರ್ವ ಹೆರಿಗೆ ಮತ್ತು ಗರ್ಭಪಾತ ಕೂಡಾ ಆಗಬಹುದು ಎನ್ನಲಾಗುತ್ತಿದೆ.




























