ನಿನ್ನೆ ಪ್ರಕಟವಾದ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 79 ಅಂಕ ಬಂದಿದ್ದರೂ ಕಡಿಮೆ ಎಂದು ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ.
ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಫಲಿತಾಂಶ ನೋಡಿ ಬಂದ ಮನೋಜ್ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಮನೋಜ್ ಅರಸೀಕೆರೆ ನಗರದ ಅನಂತ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ. ನಿನ್ನೆ ಪ್ರಕಟವಾದ ಪಿಯು ಫಲಿತಾಂಶದಲ್ಲಿ ಶೇಕಡಾ 79 ಅಂಕ ಬಂದಿತ್ತು. ಕನ್ನಡ-98, ಇಂಗ್ಲೀಷ್- 85, ಫಿಸಿಕ್ಸ್-71, ಕೆಮಿಸ್ಟ್ರಿ- 74, ಮ್ಯಾಥ್ಸ್- 82 ಮತ್ತು ಬಯಾಲಜಿ-64 ಒಟ್ಟು-474 ಅಂಕ ಪಡೆದುಕೊಂಡಿದ್ದ. ಫಲಿತಾಂಶ ನೋಡಿ ಬಂದ ಮನೋಜ್ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಮನೋಜ್ ತಂದೆ ಪ್ರಕಾಶ್, ಮಗನ ಅಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಆದರೆ ನಿನ್ನೆ ಊಟ ಮಾಡಿ ಕೊಠಡಿ ಸೇರಿಕೊಂಡಿದ್ದ ಮನೋಜ್, ಬೆಳಿಗ್ಗೆ ಎಷ್ಟೊತ್ತಾದರೂ ಹೊರ ಬಂದಿಲ್ಲ. ಏನಾಯ್ತು ಎಂದು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.



























