ಸುರತ್ಕಲ್: ನಾಗರಿಕ ಸಮಾಜವೇ ತಲೆ ತಗ್ಗಿಸುವ ಹೀನಕೃತ್ಯವೊಂದು ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಒಂದೂವರೆ ವರ್ಷದಿಂದ ಸಮಯ
ಸಾಧಿಸಿಕೊಂಡು ತನ್ನ ಇಬ್ಬರು ಹೆಣ್ಣುಮಕ್ಕಳನ್ನೇ ಲೈಂಗಿಕ ತೃಷೆ
ತೀರಿಸಲು ಬಳಸಿಕೊಂಡ ಕೀಚಕ ಅಪ್ಪ ಕೊನೆಗೂ ಪೊಲೀಸ್ ವಶವಾಗಿದ್ದಾನೆ.
ಘಟನೆಯ ವಿವರ: ಆರೋಪಿ ಮಧ್ಯ ವಯಸ್ಸಿನ ಕಾಮುಕ
ಕಾಟಿಪಳ್ಳದಲ್ಲಿ ನೆಲೆಸಿದ್ದು ಆತನಿಗೆ ೧೭ರ ವಯಸ್ಸಿನ ಪಿಯು ಓದುತ್ತಿರುವ ಅಪ್ರಾಪ್ತ ಮಗಳು ಹಾಗೂ ೧೮ ವಯಸ್ಸಿನ ಇನ್ನೊಬ್ಬ ಮಗಳಿದ್ದಾಳೆ. ಈತ ಕೆಲದಿನಗಳ
ಹಿಂದೆ ಮನೆಯಲ್ಲಿ ಗಲಾಟೆ ಮಾಡಿದ್ದು ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದ. ಈತನ ಕಾಟ ತಾಳಲಾರದೆ ಬೇಸತ್ತ ಪತ್ನಿ ಹೆಣ್ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದಳು. ಅಲ್ಲಿ ತನ್ನ ಸೋದರನಿಗೆ ನಡೆದ ವಿಷಯವನ್ನು
ವಿವರಿಸಿದ್ದಾಳೆ. ಹೆಣ್ಣುಮಕ್ಕಳು ಸೋದರ ಮಾವನಿಗೆ ತಮ್ಮ ಮೇಲೆ ಅಪ್ಪ ನಿರಂತರ ಲೈಂಗಿಕ ಕಿರುಕುಳ ಎಸಗುತ್ತಿದ್ದ ಬಗ್ಗೆ ಹೇಳಿದ್ದು ಅವರು ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
೨೦೧೮ರ ಮೇ ೧೨ರಂದು ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ಮನೆಯಲ್ಲಿ ತಾಯಿ ಇಲ್ಲದ ವೇಳೆ ಮನೆಗೆ ಬಂದಿದ್ದ ಅಪ್ಪ ತನ್ನನ್ನು ಬಲವಂತವಾಗಿ ಅತ್ಯಾಚಾರ
ಮಾಡಿದ್ದಾಗಿ ಬಾಲಕಿ ದೂರಿದ್ದಾಳೆ. ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದ ಅಪ್ಪ ೨೦೧೯ರ ಎ.೨೫ರಂದು ತನ್ನ ಇನ್ನೋರ್ವ ಮಗಳನ್ನು ಮನೆಯಲ್ಲಿ ತಾಯಿ ಮತ್ತು ಸೋದರಿ ಇಲ್ಲದ ವೇಳೆ ಅತ್ಯಾಚಾರ ಎಸಗಿದ್ದ. ಆ ಬಳಿಕ ಅನೇಕ ಬಾರಿ ಮಗಳನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ. ಇಷ್ಟೇ ಅಲ್ಲದೆ ಪತ್ನಿ ಮತ್ತು ಮಕ್ಕಳ ಮೇಲೆ
ನಿರಂತರ ಲೈಂಗಿಕ ಹಿಂಸೆ ನೀಡುತ್ತಿದ್ದ ಕಾಮುಕ ವಿನಾಕಾರಣ ಹಲ್ಲೆ ನಡೆಸುತ್ತಿದ್ದ. ಕಳೆದ ಜೂನ್ ೨ರಂದು ಆರೋಪಿ ಮೀನಿನ ಸಾರು ಸರಿಯಾಗಿ ಮಾಡಿಲ್ಲ ಎಂದು ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ತಡೆಯಲು ಬಂದ ಮಕ್ಕಳ ಮೇಲೂ ಏರಿಹೋಗಿದ್ದಾನೆ. ಈತನ ಹಿಂಸೆ ತಾಳದೆ ಪತ್ನಿ ಮಕ್ಕಳ ಜೊತೆಗೆ ತವರು ಸೇರಿದ್ದು ಅಲ್ಲಿ ನಡೆದ ಹೀನ ಕೃತ್ಯ ಬಿಚ್ಚಿಟ್ಟಿದ್ದಾರೆ. ಮಂಗಳೂರಿನ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಹಲ್ಲೆ, ಬೆದರಿಕೆ, ಪೋಕ್ಸೋ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನ್ನ ಹೆಣ್ಣುಮಕ್ಕಳ ಪಾಲಿಗೆ ರಕ್ಷಕನಾಗಬೇಕಿದ್ದ ಅಪ್ಪನೇ ಅವರ ಉಜ್ವಲ ಭವಿಷ್ಯಕ್ಕೆ ಮಾರಕನಾಗಿರುವ ಪ್ರಕರಣ ಸಮಾಜದ ನಿದ್ದೆಗೆಡಿಸಿದೆ.