ಏನೂ ಅರಿಯದ ನಾಲ್ವರು ಮಕ್ಕಳು ಆಟ ಆಡೋದಕ್ಕೆ ಹೋದವರು ದುರ್ಮರಣ ಹೊಂದಿದ್ದಾರೆ. ಚಾರುಮತಿ (8), ಚರಿಷ್ಮಾ (6), ಮನಸ್ವಿನಿ (6) ಹಾಗೂ ಉದಯ್ (8) ಮೃತ ದುರ್ದೈವಿಗಳು.
ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದೆ. ವಿಜಯನಗರದ ಕಂಟೋನ್ಮೆಂಟ್ ಪರಿಧಿಯ ದ್ವಾರಪೂಡಿಯಲ್ಲಿ ನಾಲ್ವರು ಕಂದಮ್ಮಗಳು ಪ್ರಾಣ ಬಿಟ್ಟಿವೆ. ಆದರೆ, ಆ ಕಂದಮ್ಮಗಳನ್ನ ಯಾರೂ ಕೊಂದಿಲ್ಲ. ಅದೊಂದು ಕಾರು ಈ ಮಕ್ಕಳ ಉಸಿರು ನಿಲ್ಲಿಸಿದೆ.
ಬೆಳಗ್ಗೆಯೇ ಆಟ ಆಡೋದಕ್ಕೆ ಹೋದ ಮಕ್ಕಳು ಎಷ್ಟು ಹೊತ್ತಾದ್ರೂ ಮನೆಗೆ ವಾಪಸ್ ಬರಲಿಲ್ಲ. ಕೂಡಲೇ ಪೋಷಕರು ಮಕ್ಕಳನ್ನು ಹುಡುಕುವ ಪ್ರಯತ್ನ ಮಾಡಿದ್ರು. ಹುಡುಕುತ್ತಾ ಹೊರಟವರಿಗೆ ಸಿಕ್ಕ ಕಾರಿನಲ್ಲಿ ತಮ್ಮದೇ ಕಂದಮ್ಮಗಳ ಮೃತ ದೇಹ ಕಂಡಿದ್ದಾರೆ.
ದ್ವಾರಪೂಡಿಯ ಸರ್ಕಾರಿ ಕಛೇರಿ ಮುಂದೆ ನಿಂತಿದ್ದ ಕಾರು ಲಾಕ್ ಆಗಿರ್ಲಿಲ್ಲ. ಆಡುತ್ತಾ ಅಲ್ಲಿಗೆ ಬಂದ ಮಕ್ಕಳು ಕಾರಿನೊಳಕ್ಕೆ ಹತ್ತಿ ಕುಳಿತಿದ್ದಾರೆ. ಕೂಡಲೇ ಆ ಕಾರು ಲಾಕ್ ಆಗಿದೆ. ಕಾರು ಲಾಕ್ ಆದ ಕಾರಣ ಉಸಿರಾಡಲು ಆಸ್ಪದವಿಲ್ಲದೇ ಪ್ರಾಣ ಬಿಟ್ಟಿದ್ದಾರೆ.
ಪೋಷಕರು ಮಕ್ಕಳನ್ನು ಹುಡುಕುತ್ತಾ ಕಾರಿನ ಬಳಿಗೆ ಬರುವಷ್ಟರಲ್ಲಿ ಕಂದಮ್ಮಗಳ ದೇಹ ಸೆಟೆದುಕೊಂಡಿತ್ತು. ಆ ದೃಶ್ಯ ನೋಡಿ ಪೋಷಕರು ಹೃದಯವೇ ಒಡೆದು ಹೋಗಿದೆ. ಮೃತರಲ್ಲಿ ಚಾರುಮತಿ, ಚರಿಷ್ಮಾ ಅನ್ನೋ ಅಕ್ಕ ತಂಗಿ ಕೂಡ ಇದ್ರು. ಮೃತರೆಲ್ಲರೂ ಏಳೆಂಟು ವರ್ಷ ಪ್ರಾಯದ ಕಂದಮ್ಮಗಳು.