ಕಾರ್ಕಳ: ಖಾಸಗಿ ಬಸ್ ಮತ್ತು ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಓರ್ವ ಪ್ರಯಾಣಿಕ ಮೃತ ಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಕಾರ್ಕಳ- ಪಡುಬಿದ್ರೆ ರಾಜ್ಯ ಹೆದ್ದಾರಿಯ ಅಡ್ಡೆ ಗಣಪತಿ ದೇವಸ್ಥಾನದ ಬಳಿ ನಡೆದಿದೆ.
ಉತ್ತರ ಭಾರತ ಮೂಲದ ಕಾರ್ಮಿಕ ಪ್ರತಾಪ್ ಮೃತ ಪಟ್ಟವರು. ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಖಾಸಗಿ ಬಸ್ಸು ಕಾರ್ಕಳದಿಂದ ಮಂಗಳೂರಿನ ಕಡೆಗೆ ಸಂಚರಿಸುತ್ತಿದ್ದಾಗ, ಅಡ್ಡ ರಸ್ತೆಯಿಂದ ಬಂದ ಆಟೋ ರಿಕ್ಷಾವೊಂದು ಇದ್ದಕ್ಕಿದ್ದಂತೆ ಮುಖ್ಯ ರಸ್ತೆಯ ಕಡೆಗೆ ಬಂದಿದೆ.
ಪರಿಣಾಮ ಬಸ್ಸು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದೆ.
ಆಟೋ ರಿಕ್ಷಾದಲ್ಲಿ ಉತ್ತರ ಭಾರತದ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರನ್ನು ತಕ್ಷಣವೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.