ಪುತ್ತೂರು: ಇಲ್ಲಿನ ಬಿರುಮಲೆ ಗುಡ್ಡದಲ್ಲಿ ಯುವಕ ಮತ್ತು ಯುವತಿಯ ಫೋಟೋ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಹಿನ್ನಲೆ ಪುತ್ತೂರು ನಗರ ಠಾಣೆಯಲ್ಲಿ ಯುವಕನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕುದ್ಮಾರು, ಕಡಬ ನಿವಾಸಿ ಪುರುಷೋತ್ತಮ (43) ಹಾಗೂ ಆರ್ಯಾಪು, ಪುತ್ತೂರು ನಿವಾಸಿ ರಾಮಚಂದ್ರ (38) ಗುರುತಿಸಲಾಗಿದೆ.
ಯುವಕರು ಬಿರುಮಲೆ ಗುಡ್ಡೆಯಲ್ಲಿ ನೀನು ಬ್ಯಾರಿಯ ಎಂದು ಪ್ರಶ್ನಿಸಿದ್ದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಡೆದಿತ್ತು. ಇದರ ಫೋಟೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 54/2025, ಕಲಂ: 126(2), 352, 351(2), 353(1)(C), 57, 196(1)(a) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಾಗಿದೆ.

ದೂರಿನಲ್ಲೇನಿದೆ..!
ಪ್ರಕರಣದ ಸಂತ್ರಸ್ಥ ಬಾಲಕನ ತಂದೆ ನೀಡಿದ ದೂರಿನಂತೆ, ಸದ್ರಿಯವರ ಅಪ್ರಾಪ್ತ ಪ್ರಾಯದ ಮಗನು, ಮೋಟಾರು ಸೈಕಲ್ ನಲ್ಲಿ ದಿನಾಂಕ: 05-07-2025 ರಂದು ಮಧ್ಯಾಹ್ನ ಸಮಯ, ಆತನ ಪರಿಚಯದ ಬಾಲಕಿಯೊಂದಿಗೆ ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟ ಎಂಬಲ್ಲಿ ಕುಳಿತುಕೊಂಡಿದ್ದಾಗ, ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಮಗನನ್ನು ಹಾಗೂ ಬಾಲಕಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿರುವುದಲ್ಲದೆ, ಪಿರ್ಯಾದುದಾರರ ಮಗನನ್ನು ಅನ್ಯಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿರುತ್ತಾರೆ. ಆನಂತರ ಸದ್ರಿ ಅಪರಿಚಿತ ವ್ಯಕ್ತಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮತ್ತು ಇನ್ ಸ್ಟ್ರಾಗ್ರಾಮ್ ನಲ್ಲಿ ಹರಿಯಬಿಟ್ಟು, ಪಿರ್ಯಾದಿರವರ ಮಗನನ್ನು ಅನ್ಯಧರ್ಮದವನೆಂದು ಸದ್ರಿ ವೀಡಿಯೋದಲ್ಲಿ ಹೇಳಿರುತ್ತಾರೆ.
ಸದ್ರಿ ಪ್ರಕರಣದ ಸಂತ್ರಸ್ಥರಿಬ್ಬರೂ ಅಪ್ರಾಪ್ತರಾಗಿರುವುದರಿಂದ, ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಮಾಧ್ಯಮಗಳು ಪ್ರಸಾರ ಮಾಡುವಾಗ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ನ್ಯಾಯ ನಿಯಮಾವಳಿಗಳನ್ನು ಪಾಲಿಸಬೇಕಾಗಿ ಸೂಚಿಸಲಾಗಿರುತ್ತದೆ.



























