ದಿನಾಂಕ 08.07.2025 ರಂದು ಬೆಳಿಗ್ಗೆ, ಪ್ರಕರಣದ ಅಪ್ರಾಪ್ತ ಪ್ರಾಯದ ಬಾಲಕಿಯು ತನ್ನ ತಾಯಿಯೊಂದಿಗೆ, ಪುತ್ತೂರು ನೆಹರೂ ನಗರ ಜಂಕ್ಷನ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಬಂದು ಸಂತ್ರಸ್ಥ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿರುತ್ತಾನೆ.
ಈ ಬಗ್ಗೆ ಸಂತ್ರಸ್ಥೆಯ ತಾಯಿ ನೀಡಿದ ದೂರಿನ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಕ್ರ: 53/2025 ಕಲಂ: 126(2), 74, 115(2), 353(2) BNS 2023, 8 POCSO 2012 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಆರೋಪಿ ಕಬಕ, ಪುತ್ತೂರು ನಿವಾಸಿ ನವೀನ್ ಚಂದ್ರ (49) ಎಂಬಾತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಸದ್ರಿ ಪ್ರಕರಣದ ಸಂತ್ರಸ್ಥ ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಮಾಧ್ಯಮಗಳು ಪ್ರಸಾರ ಮಾಡುವಾಗ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ನ್ಯಾಯ ನಿಯಮಾವಳಿಗಳನ್ನು ಪಾಲಿಸಬೇಕಾಗಿ ಸೂಚಿಸಲಾಗಿರುತ್ತದೆ.