ತುಮಕೂರು: ಮನೆ ಮಗಳು ದೂರದ ಸಿಟಿಯಲ್ಲಿ ಓದುತ್ತಿದ್ದಾಳೆ ಎಂದು ಫೊನ್ ಪೇ, ಗೂಗಲ್ ಪೇ ಮೂಲಕ ಹೆಣ್ಣು ಮಕ್ಕಳಿಗೆ ಹಣ ಹಾಕಿಸೋ ಮುನ್ನಾ ಎಚ್ಚರ. ಹಣವನ್ನು ಕಳಿಸಲು ಮಗಳ ಮೊಬೈಲ್ ನಂಬರ್ ಕೊಟ್ಟು ಹಣ ಹಾಕಿಸಿದ ತಪ್ಪಿಗೆ, ಇದೀಗ ಅಪ್ಪನೇ ಮಗಳನ್ನು ಶಾಶ್ವತವಾಗಿ ಕಳೆದುಕೊಂಡು ಕಣ್ಣೀರು ಹಾಕಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗ್ಯಾರಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ವಿವಾಹಿತನ ಕಿರುಕುಳಕ್ಕೆ ಬೇಸತ್ತು ಯುವತಿ ಭಾವನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ನೆಲಮಂಗಲದ ಚಿಕ್ಕಮ್ಮನ ಮನೆಯಲ್ಲಿ ಭಾವನ (22) ನೇಣು ಬಿಗಿದುಕೊಂಡಿದ್ದಾಳೆ. ಇದೇ ಗ್ರಾಮದ ವಿವಾಹಿತ ನವೀನ್ ಎಂಬಾತನ ಕಿರುಕುಳಕ್ಕೆ ಬೇಸತ್ತು ಮಗಳು ಸಾವಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಗುಬ್ಬಿ ತಾಲೂಕಿನ ಗ್ಯಾರಹಳ್ಳಿ ಗ್ರಾಮದ ಭಾವನಾ, ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದಳು.
ಮೈಸೂರಿನಲ್ಲಿದ್ದ ಭಾವನಾಳ ಖರ್ಚಿಗೆ ಅವಳ ಅಪ್ಪ ಪೋನ್ ಪೇ ಮೂಲಕ ಹಣ ಕಳಿಸಬೇಕಿತ್ತು. ತಮಗೆ ಫೋನ್ ಪೇ ವ್ಯವಹಾರ ಮಾಡಲು ಬಾರದ ಹಿನ್ನೆಲೆಯಲ್ಲಿ ಅದೇ ಗ್ರಾಮದ ನವೀನ್ ಎಂಬಾತನಿಗೆ ಹೇಳಿ ಮಗಳ ಮೊಬೈಲ್ ನಂಬರ್ ಕೊಟ್ಟು ಆಕೆಗೆ, ಹಣ ಕಳಿಸಲು ಹೇಳುತ್ತಿದ್ದರು. ಆದರೆ, ಈತ ಯುವತಿಯ ಮೊಬೈಲ್ ನಂಬರ್ ದುರ್ಬಳಕೆ ಮಾಡಿಕೊಂಡು, ತನ್ನನ್ನು ಪ್ರೀತಿ ಮಾಡುವಂತೆ ಭಾವನಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಈಗಾಗಲೇ ಮದುವೆಯಾಗಿ ಮಕ್ಕಳನ್ನ ಹೊಂದಿರುವ ನವೀನನ ಪ್ರೀತಿಗೆ ಭಾವನಾ ವಿರೋಧ ವ್ಯಕ್ತ ಪಡಿಸಿದ್ದಾಳೆ.
ನೀನು ಪ್ರೀತಿ ಮಾಡದಿದ್ದರೆ ರೈಲಿಗೆ ತಲೆ ಕೊಟ್ಟು ಸಾಯೋದಾಗಿ ನವೀನ ಬೆದರಿಕೆ ಹಾಕಿದ್ದನು. ಇದಕ್ಕಾಗಿ ರೈಲ್ವೆ ಟ್ರ್ಯಾಕ್ ಮೇಲೆ ನಿಂತು ನವೀನ ಪೋಟೊ ತೆಗೆದು ಭಾವನಾಗೆ ಕಳುಹಿಸಿ ಬ್ಲಾಕ್ ಮೇಲ್ ಕೂಡ ಮಾಡಿದ್ದನು. ನವೀನನ ಕಿರುಕುಳದಿಂದ ಕಳೆದ 15 ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ಮಾತ್ರೆ ಸೇವಿಸಿದ್ದಳು. ಆದರೆ, ನರ್ಸಿಂಗ್ ಮಾಡುತ್ತಿದ್ದರಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಎಚ್ಚೆತ್ತ ವೈದ್ಯರು ಆಕೆಯನ್ನು ಬದುಕುಳಿಸಿದ್ದರು. ಆಮೇಲೆ ಭಾವನಾಳ ತಂದೆ ನವೀನ್‌ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಗ ಪೊಲೀಸರು ಇಬ್ಬರನ್ನೂ ಕೂರಿಸಿ ಬುದ್ದಿ ಮಾತು ಹೇಳಿದ್ದರು. ಆಗ ನವೀನ್‌ನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟು ಕಳುಹಿಸಿದ್ದರು. ಕಳೆದ ಶನಿವಾರ ನೆಲಮಂಗಲದಲ್ಲಿರುವ ಚಿಕ್ಮಮ್ಮನ ಮನೆಗೆ ಭಾವನಾ ಹೋಗಿದ್ದಳು. ಇದೀಗ ನಿನ್ನೆ ಸಂಜೆ ಚಿಕ್ಕಮ್ಮನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಆಗ, ಆಕೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡದೇ ಕಾರಿನಲ್ಲಿ ಮೃತ ಯುವತಿ ದೇಹವನ್ನು ಗುಬ್ಬಿಯ ಗ್ಯಾರಹಳ್ಳಿಗೆ ತಂದಿದ್ದಾರೆ. ನಂತರ, ವೀವಾಹಿತ ನವೀನ್ ಮನೆ ಮುಂದೆ ಭಾವನಾಳ ಶವ ಇಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕೂಡಲೇ ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು, ನೆಲಮಂಗಲದಲ್ಲಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ವಿವಾಹಿತ ನವೀನ್ ನಾಪತ್ತೆಯಾಗಿದ್ದಾನೆ. ಇದೀಗ ಒಬ್ಬ ಯುವತಿ ಜೀವನವನ್ನೇ ಹಾಳು ಮಾಡಿರುವ ನವೀನ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.