ಬೆಂಗಳೂರು: ಆನ್‌ಲೈನ ಮೂಲಕ ಕಾಲ್ ಗರ್ಲ್ ಪಡೆಯಲು ಹೋಗಿ ಬೆಂಗಳೂರಿನ ಟೆಕ್ಕಿಯೊಬ್ಬರು 1.4 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ಕಾಲ್ ಗರ್ಲ್ ಸೇವೆ ಬೇಕೆಂದು ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್‌ನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದ್ದರು. ಆಗ ಅವರಿಗೆ ಇಶಾನಿ ರೆಡ್ಡಿ ಎಂದು ಗುರುತಿಸಿಕೊಂಡಿದ್ದವಳ ಜತೆ ಸಂವಹನ ಏರ್ಪಟ್ಟಿತ್ತು.
ಕಾಲ್ ಗರ್ಲ್ ಮತ್ತು ಸ್ಪಾ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡ ಇಶಾನಿ, 299 ರೂ. ಪಾವತಿಸುವಂತೆ ಸೂಚಿಸಿದ್ದಳು. ಅದನ್ನು ಪಾವತಿಸಿದ ನಂತರ, ವಿವಿಧ ಸೇವಾ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣವನ್ನು ಟ್ರಾನ್ಸ್ಫರ್ ಮಾಡುವಂತೆ ಪದೇ ಪದೇ ಆಕೆ ಒತ್ತಾಯಿಸಿದ್ದಳು. ಒಟ್ಟಾರೆಯಾಗಿ, 1,49,052 ರೂ.ಗಳನ್ನು ಟೆಕ್ಕಿ ಕಳುಹಿಸಿದ್ದರು.
ಬಳಿಕ, ಮೊತ್ತ ಹೆಚ್ಚಾಗಿದ್ದು, ಸೇವೆ ಬೇಕಾಗಿಲ್ಲ ಎಂದು ಟೆಕ್ಕಿ ಹೇಳಿದ್ದಾರೆ. ಅಲ್ಲದೆ, ಪಾವತಿ ಮಾಡಿದ್ದ ಮೊತ್ತವನ್ನು ರಿಫಂಡ್ ಮಾಡುವಂತೆ ಕೇಳಿದ್ದಾರೆ. ಆದರೆ, ಆ ಕಡೆಯಿಂದ ಉತ್ತರವೇ ಬಂದಿಲ್ಲ. ಹೀಗಾಗಿ ಟೆಕ್ಕಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ಈ ವಿಷಯದ ಬಗ್ಗೆ ವರದಿ ಮಾಡಿ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ.