ಪಟ್ಟೆ ಬಡಗನ್ನೂರು: ಇಲ್ಲಿನ ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಕೃಷ್ಣ ಲೀಲೆ ಕಾರ್ಯಕ್ರಮವು ಎಸ್ಕೆ ಫ್ರೆಂಡ್ಸ್ ಮುಡಿಪಿನಡ್ಕ, ಶ್ರೀಕೃಷ್ಣ ಯುವಕ ಮಂಡಲ ಪಟ್ಟೆ, ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ ಪಟ್ಟೆ, ಶ್ರೀಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ, ಅಯ್ಯಪ್ಪ ಭಜನಾ ಮಂಡಳಿ ಪೆರಿಗೇರಿ ಹಾಗೂ ನವಚೈತನ್ಯ ಯುವಕ ಮಂಡಲ ಪೆರಿಗೇರಿ ಇವರ ಸಹಯೋಗದೊಂದಿಗೆ ದಿನಾಂಕ 16-08-2025ರಂದು ಜರಗಿತು.
ಪೂರ್ವಾಹ್ನ 09 ಗಂಟೆಗೆ ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾದ ಸಮಾರಂಭವು ಅಪರಾಹ್ನ ಶ್ರೀಕೃಷ್ಣ ರಥ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು. ಪ್ರಾರಂಭದಲ್ಲಿ ಸಂಸ್ಥೆಗಳ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಪಟ್ಟೆ ಇವರಿಂದ ಭಜನಾ ಕಾರ್ಯಕ್ರಮವು ಚಾಲನೆಗೊಂಡಿತು.
ಬಳಿಕ ಮುದ್ದುಕೃಷ್ಣ ಹಾಗೂ ಬಾಲಕೃಷ್ಣ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಮಡಕೆ ಒಡೆಯುವುದು, ಮಹಿಳೆಯರಿಗೆ ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ ಪಂದ್ಯಾಟವು ನಡೆಯಿತು. ಶ್ರೀಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ ಇದರ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್ ಆಚಾರ್ಯ ಕುಡ್ಚಿಲ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಶ್ರೀಮತಿ ಯಮುನ ಕೆ, ಮಹಿಳೆಯರ ಹಗ್ಗಜಗ್ಗಾಟಕ್ಕೆ ಚಾಲನೆ ನೀಡಿದರು. ತದನಂತರ ವಿದ್ವಾನ್ ದೀಪಕ್ಕುಮಾರ್ ಮತ್ತು ಬಳಗದವರಿಂದ “ಶ್ರೀಕೃಷ್ಣ ಲೀಲೆ” ವಿಶೇಷ ನೃತ್ಯ ರೂಪಕ ಕಾರ್ಯಕ್ರಮವು ನಡೆಯಿತು.
ಅಪರಾಹ್ನ ಸರಿಯಾಗಿ 2.30ಕ್ಕೆ ಶ್ರೀಕೃಷ್ಣ ರಥ ಮೆರವಣಿಗೆಯು ಶ್ರೀನಿವಾಸ್ ಭಟ್ ಚಂದುಗೂಡ್ಲು ಇವರು ಚಾಲನೆ ನೀಡುವುದರೊಂದಿಗೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಠಾರದಿಂದ ಶ್ರೀಕೃಷ್ಣ ಭಜನಾ ಮಂದಿರ ಮುಡಿಪುನಡ್ಕದವರೆಗೆ ನಡೆಯಿತು. ಈ ಮೆರವಣಿಗೆಯಲ್ಲಿ ವಿವಿಧ ಕುಣಿತ ಭಜನಾ ತಂಡಗಳು, ವಿದ್ಯಾರ್ಥಿಗಳ ಕೃಷ್ಣ ವೇಷ, ಗೊಂಬೆ ಕುಣಿತಗಳು ಪ್ರೇಕ್ಷಕರ ಮನಸೂರೆಗೊಂಡವು. ಇದೇ ಸಂದರ್ಭದಲ್ಲಿ ಅಟ್ಟೆ ಮಡಿಕೆ ಸ್ಪರ್ಧಾ ಕೂಟವೂ ನಡೆಯಿತು. ಎಸ್ಕೆ ಫ್ರೆಂಡ್ಸ್ ಮುಡಿಪಿನಡ್ಕ ತಂಡವು ಟ್ರೋಪಿಯೊಂದಿಗೆ ನಗದು ಬಹುಮಾನದೊಂದಿಗೆ ಈ ಕೂಟದಲ್ಲಿ ವಿಜಯಿಶಾಲಿಯಾಯಿತು.
ಸಂಜೆ ಶ್ರೀಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ ಇಲ್ಲಿ ಸಮಾರೋಪದೊಂದಿಗೆ ಶ್ರೀಕೃಷ್ಣ ಲೀಲೆ ಕಾರ್ಯಕ್ರಮವು ಸಂಪನ್ನಗೊಂಡಿತು. ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಹಾಗೂ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಸಮಾರಂಭದ ನೇತೃತ್ವವನ್ನು ವಹಿಸಿದ್ದರು.
ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಸ್ನೇಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ದಾಮ್ಲೆ, ಪೋಷಕ ಮಂಡಳಿಯ ಆಧ್ಯಕ್ಷರುಗಳಾದ ಶ್ರೀ ಲಿಂಗಪ್ಪ ಗೌಡ ಮೂಡಿಕೆ, ಕೇಶವ ಪ್ರಸಾದ್ ನೀಲಗಿರಿ, ಸತೀಶ್ ಕೊಪ್ಪಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಅನೂಪ್ ಸೇರಿದಂತೆ ಊರ ಮಹನೀಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಭಾಗವಹಿಸಿದರು.