ಪುತ್ತೂರು : ಲಂಚ ಸ್ವೀಕಾರಿಸುತ್ತಿದ್ದಾಗ ಪುತ್ತೂರು ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಎಫ್.ಡಿ.ಎ ಆಗಿರುವ ಸುನಿಲ್ ದೂರುದಾರನಿಂದ ಹನ್ನೆರಡು ಸಾವಿರ ಲಂಚ ಹಣವನ್ನು ಕಚೇರಿಯಲ್ಲಿ ಸ್ವೀಕಾರಿಸುತ್ತಿದ್ದಾಗ ಮಂಗಳೂರು ಲೋಕಾಯಯಕ್ತ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ -2 ತಹಶೀಲ್ದಾರ್ ಕುಡಲಗಿ ಪರಾರಿಯಾಗಿದ್ದು ಆತನಿಗಾಗಿ ಬಲೆ ಬಿಸಲಾಗಿದೆ.
ಪ್ರಕರಣ: ದೂರುದಾರರ ಚಿಕ್ಕಪ್ಪ ಪುತ್ತೂರು ತಾಲೂಕು ನೆಟ್ಟಣಿಗೆ ಮುಡೂರು ಗ್ರಾಮದಲ್ಲಿ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ದರ್ಖಾಸ್ತು ಮಂಜೂರಾಗಿದ್ದು,ದೂರುದಾರರ ಚಿಕ್ಕಪ್ಪನವರಿಗೆ ಅನಾರೋಗ್ಯ ಇದ್ದುದರಿಂದ ಅವರು ತನ್ನ ಸ್ವ-ಇಚ್ಛೆಯಿಂದ ಉಪ ನೋಂದಣಾಧಿಕಾರಿ ಕಛೇರಿ, ಪುತ್ತೂರು ಇಲ್ಲಿ ವೀಲುನಾಮೆ ಯಾನೆ ಮರಣ ಶಾಸನ ಬರೆಸಿ ಕೊಟ್ಟಿರುತ್ತಾರೆ. ಇದರ ಪ್ರಕಾರ ಅವರ ಚಿಕ್ಕಪ್ಪನ ಮರಣ ನಂತರ ಸದ್ರಿ ಜಮೀನಿನ ಸಂಪೂರ್ಣ ಹಕ್ಕು ದೂರುದಾರರಿಗೆ ಸೇರಿರುತ್ತದೆ. ಸದ್ರಿ ಜಮೀನು ದೂರುದಾರರ ಚಿಕ್ಕಪ್ಪನವರಾಗಿ ಮಂಜೂರಾಗಿ 27 ವರ್ಷ ಆಗಿರುತ್ತದೆ. ಸದರಿ ಜಮೀನನ್ನು ಪರಭಾರೆ ಮಾಡಲು ಮಾನ್ಯ ತಹಶೀಲ್ದಾರ್, ಪುತ್ತೂರು ರವರಿಂದ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇದ್ದುದರಿಂದ ಪಿರ್ಯಾದಿದಾರರ ಚಿಕ್ಕಪ್ಪನವರು ಡಿಸೆಂಬರ್ 2024 ರಂದು ತಹಶೀಲ್ದಾರರು ಪುತ್ತೂರು ತಾಲೂಕು ಇವರಿಗೆ ಸಾಗುವಳಿ ಚೀಟಿ ಮೂಲಕ ಮಾನ್ಯ ತಹಶೀಲ್ದಾರರಿಂದ ಮಂಜೂರಾದ ಜಾಗ ಮಾರಾಟ ಮಾಡುವರೇ ನಿರಾಕ್ಷೇಪಣಾ ಪತ್ರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಇಲ್ಲಿಯವರೆಗೆ ನಿರಾಕ್ಷೇಪಣಾ ಪತ್ರ ಸಿಕ್ಕಿರದೇ ಇದ್ದುದರಿಂದ ಸದ್ರಿ ಅರ್ಜಿಯ ಬಗ್ಗೆ ವಿಚಾರಿಸಲು ದೂರುದಾರರ ಚಿಕ್ಕಪ್ಪನವರು ದೂರುದಾರರಿಗೆ ಹೇಳಿದ್ದು, ಈ ಬಗ್ಗೆ ದೂರುದಾರರು ಜೂನ್ 26 2025 ರಂದು ಪುತ್ತೂರು ತಹಶೀಲ್ದಾರ್ ಕಛೇರಿಯ ಭೂ ಸುಧಾರಣಾ ಶಾಖೆಗೆ ಹೋಗಿ ಕೇಸ್ ವರ್ಕರ್ ಸುನೀಲ್ ರವರಲ್ಲಿ ತನ್ನ ಚಿಕ್ಕಪ್ಪ ರವರು ಸಲ್ಲಿಸಿದ ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದಾಗ ಕೇಸ್ ವರ್ಕರ್(ಎಫ್.ಡಿ.ಎ) ಸುನೀಲ್‌ರವರು ತಹಶೀಲ್ದಾರ್‌ರವರ ಸಹಿಗೆ ಬಾಕಿ ಇರುತ್ತದೆ. ಅದಕ್ಕೆ ಸ್ವಲ್ಪ ಹಣ ಖರ್ಚು ಇರುತ್ತದೆ, ತಹಶೀಲ್ದಾರರಿಗೆ ಹತ್ತು ಸಾವಿರ ರೂಪಾಯಿ ಕೊಡಬೇಕಾಗುತ್ತದೆ. ಮತ್ತೆ ನನಗೂ ಹಣ ಕೊಡಬೇಕಾಗುತ್ತದೆ ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸುನೀಲ್ ಕೇಸ್ ವರ್ಕರ್ ಮತ್ತು ಪುತ್ತೂರು ತಹಶೀಲ್ದಾರ್ ಕುಡಲಗಿ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಆ. 28 ರಂದು ಶ್ರೀ ಸುನೀಲ್, ಕೇಸ್ ವರ್ಕರ್, ಭೂ ಸುಧಾರಣಾ ಶಾಖೆ, ತಹಶೀಲ್ದಾರ್ ಕಛೇರಿ, ಪುತ್ತೂರು ತಾಲೂಕು ರವರು ದೂರುದಾರರಿಂದ ಹನ್ನೆರಡು ಸಾವಿರ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸುನಿಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಬ್ಬ ಆರೋಪಿ ಪುತ್ತೂರು ತಾಲೂಕು ತಹಶೀಲ್ದಾರರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು. ತಹಶೀಲ್ದಾರ್ ಕುಡಲಗಿ ಪ್ರಸ್ತುತ ತಲೆಮರೆಸಿಕೊಂಡಿರುತ್ತಾರೆ.
ಮಂಗಳೂರು ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿ ಡಾ.ಗಾನ.ಪಿ. ಕುಮಾರ್, ಇನ್ಸ್ಪೆಕ್ಟರ್ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವರ್, ಸಿಬ್ಬಂದಿ ಮಹೇಶ್, ರಾಜಪ್ಪ,ರಾಧಕೃಷ್ಣ,ಅದರ್ಶ,ವಿವೇಕ್, ವಿನಾಯಕ, ಪ್ರವೀಣ್,ಗಂಗಣ್ಣ, ನಾಗಪ್ಪ,ಮಾಹದೇವ,ಪವಿತ್ರ,ದುಂಡಪ್ಪ,ರುದ್ರಗೌಡ,ರಾಜಶೇಖರ್ ಕಾರ್ಯಾಚರಣೆ ಭಾಗಿಯಾಗಿದ್ದಾರೆ.