ಪುತ್ತೂರು : ಸಂಚಾರಿ ಪೊಲೀಸರ ಸೂಚನೆಯನ್ನು ಪಾಲಿಸಲಿಲ್ಲವೆಂಬ ಕಾರಣಕ್ಕೆ ಬೆನ್ನಟ್ಟಿಕೊಂಡು ಬಂದು ಅಟೋ ಚಾಲಕನ ಮೈ ಮೇಲೆ ಕೈ ಮಾಡಿ ಅವಾಚ್ಯ ಪದಗಳಿಂದ ಬೈದು ನಿಂದಿಸಿದ ಘಟನೆ ಸಂಬಂಧಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಬಗ್ಗೆ ವರದಿಯಾಗಿದೆ.
ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಆಟೋ ರಿಕ್ಷಾವೊಂದನ್ನು ಬೆನ್ನಟ್ಟಿಕೊಂಡು ಬಂದಿರುವುದು, ಬೈಕ್ ನಿಲ್ಲಿಸಿ ರಿಕ್ಷಾವನ್ನು ತಡೆದು ನಿಲ್ಲಿಸಿದ ಪೊಲೀಸರು ರಿಕ್ಷಾವನ್ನು ಆಫ್ ಮಾಡಲು ಸೂಚಿಸಿ ಅಟೋ ರಿಕ್ಷಾದ ಕೀ ಕಿತ್ತುಕೊಳ್ಳಲು ಯತ್ನಿಸುವುದು, ಪೊಲೀಸರ ವಿಡಿಯೋ ಮಾಡುತ್ತೀಯಾ. ಎಂದು ಪ್ರಶ್ನಿಸುವುದು, ಆತನ ಅಂಗಿಯನ್ನು ಹಿಡಿದೆಳೆಯುವುದು, ಅವಾಚ್ಯ ಪದಗಳಿಂದ ನಿಂದಿಸುವುದು ಮತ್ತು ಮೈ ಮೇಲೆ ಕೈ ಮಾಡುವುದು ದೃಶ್ಯಾವಳಿಯಲ್ಲಿ ಕಾಣಿಸಿದೆ.
ಈ ವೀಡಿಯೋ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಆಕ್ರೋಶಗೊಂಡ ಸಾರ್ವಜನಿಕರು ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆಯುವ ವರೆಗೆ ಹಂಚಿಕೊಳ್ಳಿ ಎಂದು ವಿನಂತಿಸಿ ಮತ್ತಷ್ಟು ಗ್ರೂಪುಗಳಿಗೆ ವಿಡಿಯೋ ಹರಿದಾಡುವಂತೆ ಮಾಡಿದ್ದಾರೆ.
ಪ್ರಕರಣದ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದ್ದು, ವಿಡಿಯೋ ದಲ್ಲಿ ಇಬ್ಬರು ಪೊಲೀಸರ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ತೋರುತ್ತಿದ್ದು, ಘಟನೆಯ ಕಾರಣವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.