ಪುತ್ತೂರು: ಪುತ್ತೂರಿನಲ್ಲಿ ಮೊಳಗುತ್ತಿದ್ದ ಸೈರನ್ ಇತಿಹಾಸದ ಪುಟ ಸೇರಿ ಅನೇಕ ವರ್ಷಗಳೇ ಕಳೆದಿದೆ. ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮೊಳಗುತ್ತಿದ್ದ ಈ ಸೈರನ್ ಕಿ ಮೀ ದೂರಕ್ಕೂ ಕೇಳುತ್ತಿತ್ತು, ಮಧ್ಯಾಹ್ನ 12 ಗಂಟೆ ವೇಳೆಗೆ ಆ ಬಳಿಕ ರಾತ್ರಿ 8 ಗಂಟೆ ವೇಳೆ ಈ ಸೈರನ್ ಮೊಳಗುತ್ತಿತ್ತು.
1975 ನೇ ಇಸವಿಯಲ್ಲಿ ನಿರ್ಮಾಣವಾಗಿದ್ದ ಈ ಸೈರನ್ ಆ ಬಳಿಕ ಕಾರಣಾಂತರಗಳಿಂದ ನಿಂತು ಹೋಗಿತ್ತು ಅದರ ಕಟ್ಟಡ ಯಂತ್ರೋಪಕರಣಗಳು ಇನ್ನೂ ಹಾಗೆಯೇ ಇದೆ. ಇದೇ ಸೈರನ್ ಗೆ ಇದೀಗ ಮರು ಜೀವ ಬರಲಿದೆ.
ಸೈರನ್ ಕೇಂದ್ರವನ್ನು ಪುನರಾರಂಭ ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ನಗರಸಭೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ಈಗ ಇರುವ ಮಿನಿ ವಿಧಾನ ಸೌಧದ ಹಿಂದುಗಡೆ ಕಟ್ಟಡದಲ್ಲಿ ನ್ಯಾಯಾಲಯ ಸಂಕೀರ್ಣ ಆರಂಭವಾದಾಗ ಸೈರನ್‌ಗೆ ಬ್ರೇಕ್ ಬಿದ್ದಿತ್ತು ಎಂಬ ಮಾಹಿತಿ ಇದೆ.
ಸೈರನ್ ಮೊಳಗಿದರೆ ಅದು ಕೋರ್ಟು ಕಲಾಪಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಬಂದ್ ಮಾಡಲಾಗಿತ್ತು. ಈಗ ಅಲ್ಲಿ ನ್ಯಾಯಾಲಯ ಸಂಕೀರ್ಣ ಇಲ್ಲ. ಪಕ್ಕದಲ್ಲೇ ಕೋರ್ಟು ಇದ್ದರೂ ಅದು ಬನ್ನೂರಿನ ಆನೆಮಜಲಿನಲ್ಲಿರುವ ಹೊಸ ಕಟ್ಟಡಕ್ಕೆ ಶೀಘ್ರ ಸ್ಥಳಾಂತರವಾಗಲಿದೆ.
ಇನ್ನು ಮುಂದೆ ಸೈರನ್ ಮೊಳಗಿದರೆ ನ್ಯಾಯಾಲಯ ಕಲಾಪಕ್ಕೆ ಅಡ್ಡಿಯಾಗುವ ಆತಂಕವಿಲ್ಲದೇ ಇರುವ ಕಾರಣ ಪುತ್ತೂರು ನಗರದ ಮಧ್ಯಭಾಗದಲ್ಲಿ ಸೈರನ್ ಮೊಳಗಲಿದೆ.
ಹಿಂದಿನ ಕಾಲದ ಗತವೈಭವ ಮತ್ತೆ ಮರಳಲಿ ಎಂಬುದು ಅನೇಕರ ಬೇಡಿಕೆ ಇದೆ. ಜನರಿಗೆ ಇಷ್ಟವಾದ ಈ ಸೈರನ್ ಮತ್ತೆ ಮೊಳಗಿಸುವ ವ್ಯವಸ್ಥೆ ಮಾಡುತ್ತೇನೆ. ನಗರಸಭೆಗೆ ಸೂಚನೆಯನ್ನು ನೀಡಿದ್ದೇನೆ. ಸೋಮವಾರವೇ ಸೈರನ್ ಕೇಂದ್ರವನ್ನು ಪರಿಸೀಲಿಸಿ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸೂಚನೆಯನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮಧ್ಯಾಹ್ನ 12 ಗಂಟೆ ಹಾಗೂ ರಾತ್ರಿ 8 ಗಂಟೆಗೆ ಸೈರನ್ ಮೊಳಗಲಿದೆ. – ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

























