ದಿನಾಂಕ 16-11-2025 ರಂದು ಬಂಟ್ವಾಳ ತಾಲೂಕು ಅರಳ ಗ್ರಾಮದ ನಿವಾಸಿ ಮೈಯದಿ (57) ಎಂಬವರು, ಅವರ ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ಕಟ್ಟಿಕೊಂಡು, ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ ಐ ರವರು ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ದಾಳಿ ಮಾಡಿದಾಗ, ಮನೆಯ ಬಳಿಯ ಶೆಡ್ ನಲ್ಲಿ ಮೂರು ಜನರು, ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದು, ದಾಳಿ ಸಮಯ ಇಬ್ಬರು ಪರಾರಿಯಾಗಿರುತ್ತಾರೆ.
ಒರ್ವನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಮೈಯದಿ (57) ಎಂಬಾತನಾಗಿದ್ದು, ಶೆಡ್ ನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದ್ದು, ವಧೆ ಮಾಡಿದ ಸುಮಾರು 150 ಕೆಜಿ ದನದ ಮಾಂಸವನ್ನು ವಶ ಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ 172/2022 ಕಲಂ 4,5,7,12 ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020 ಕಲಂ 11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಹಾಗೂ ಕಲಂ 303(2)307 ಬಿಎನ್ ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ದಸ್ತಗಿರಿಯಾದ ಆರೋಪಿ ಮೈಯದಿ ಎಂಬಾತನನ್ನು ಮಾನ್ಯ ನ್ಯಾಯಾಲಯ ಹಾಜರುಪಡಿಸಲಾಗುವುದು. ತಲೆಮರೆಸಿಕೊಂಡ ಆರೋಪಿಗಳ ಪತ್ತೆಕಾರ್ಯ ಪ್ರಗತಿಯಲ್ಲಿದೆ.
ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮನೆಯ ಆವರಣದ ಶೆಡ್ ನಲ್ಲಿ ಕಸಾಯಿಖಾನೆಯನ್ನು ನಿರ್ಮಾಣ ಮಾಡಿಕೊಂಡು ಮನೆಯಿಂದಲೇ ವಿದ್ಯುತ್ ಸಂಪರ್ಕ ಪಡೆದು ಜಾನುವಾರುಗಳ ವಧೆ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಈತನ ಮನೆ ಹಾಗೂ ಶೇಡ್ ನ ಆವರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿ, ಮಾನ್ಯ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರಿಗೆ ಮುಟ್ಟುಗೋಲು ಮಾಡುವ ಬಗ್ಗೆ ವರದಿಯನ್ನು ಸಲ್ಲಿಸಲಾಗಿರುತ್ತದೆ.



























