ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹಿಂದಿನ ಬಜೆಟ್ ನಲ್ಲಿ ರೂ.1 ಸಾವಿರ ಗೌರವ ಧನ ಹೆಚ್ಚಿಸಲಾಗಿದೆ.
ಮುಂದಿನ ಬಜೆಟ್‌ನಲ್ಲಿ ಮತ್ತೆ ರೂ.1 ಸಾವಿರ ಹೆಚ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದ್ದಾರೆ.
ಗೌರವ ಧನ ಹೆಚ್ಚಳದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಈಗಾಗಲೇ ಚರ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಲ್ಲಿ ಶೇ.70ರಷ್ಟು ಮಂದಿ ಗೃಹಲಕ್ಷ್ಮಿ ನೆರವು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮೀ ಸಹಕಾರ ಬ್ಯಾಂಕ್ ನಲ್ಲಿ ರೂ.30 ಸಾವಿರದಿಂದ ರೂ.5 ಲಕ್ಷದವರೆಗೆ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದವರು ತಿಳಿಸಿದರು.
ಹಿಂದಿನ ಎರಡು ತಿಂಗಳ ಗೃಹಲಕ್ಷ್ಮೀ ಹಣ ಬಾಕಿ ಇದೆ. ಆದಷ್ಟು ಶೀಘ್ರ ಬಿಡುಗಡೆ ಮಾಡಲಾಗುವುದು.ಇದಕ್ಕಾಗಿ ತಿಂಗಳಿಗೆ ರೂ.2,500 ಕೋಟಿ ಬೇಕಾಗುತ್ತದೆ.
ಕಾಲ ಕಾಲಕ್ಕೆ ಫಲಾನುಭವಿಗಳಿಗೆ ಯೋಜನೆಯ ನೆರವು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ನ.28ರಂದು ಬೆಂಗಳೂರಿನ ಆರಮನೆ ಮೈದಾನದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಅಕ್ಕ ಪಡೆ, ಸಹಕಾರ ಬ್ಯಾಂಕ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳರ್ ತುಮಕೂರಿನಲ್ಲಿ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ
ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.




























