ಬೆಂಗಳೂರು: ನಗರದ ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಎಟಿಎಂ ವಾಹನದಲ್ಲಿದ್ದ ಬರೋಬ್ಬರಿ 7.11 ಕೋಟಿ ರೂ ದೋಚಿಕೊಂಡು ಗ್ಯಾಂಗ್ ಇನೋವಾ ಕಾರಿನಲ್ಲಿ ಪರಾರಿಯಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಎಂಎಸ್ ಕಂಪನಿ ಮ್ಯಾನೇಜರ್ ದೂರಿನ ಆಧಾರದಲ್ಲಿ ಡಕಾಯಿತಿ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ದರೋಡೆಕೋರರು ಹೇಗೆ ಬಂದು ವಾಹನವನ್ನು ಹೈಜಾಕ್ ಮಾಡಿದರು? ಎಲ್ಲಿಗೆ ಕರೆದೊಯ್ದರು? ಬಳಿಕ ಹೇಗೆ ಹಣ ದೋಚಿಕೊಂಡು ಹೋದರು ಎನ್ನುವ ಬಗ್ಗೆ ಸಿಎಂಎಸ್ ವಾಹನ ಚಾಲಕ ಬಿನೋದ್ ವಿವರಿಸಿದ್ದಾರೆ.
ಇನ್ನು ಸಿಎಂಎಸ್ ವಾಹನ ಚಾಲಕ ಬಿನೋದ್ ಘಟನೆಯ ವಿವರ ನೀಡಿದ್ದು, ನಾವು ವಾಹನದಲ್ಲಿ ನಾಲ್ಕು ಜನ ಬಂದ್ವಿ. ಅವರು ಕಾರಲ್ಲಿ ಐದಾರು ಜನ ಬಂದು ನಾವು ಆರ್ ಬಿಐ ನವರು ಎಂದು ಹೇಳಿದರು. ಸಿಎಂಎಸ್ ವಾಹನದಲ್ಲಿದ್ದ ಉಳಿದವರನ್ನ ತಮ್ಮ ಕಾರಲ್ಲಿ ಹತ್ತಿಸಿಕೊಂಡ್ರು. ನನ್ನನ್ನ ಸಿಎಂಎಸ್ ವಾಹನದಲ್ಲೇ ಕರೆದುಕೊಂಡು ಹೋಗಿ ಡೈರಿ ಸರ್ಕಲ್ ಬ್ರಿಡ್ಜ್ ಮೇಲೆ ನಿಲ್ಲಿಸಿದರು. ಬಳಿಕ ನನ್ನ ಫೋನ್ ಕಿತ್ತುಕೊಂಡಿದ್ದು, ವಾಹನದಲ್ಲಿದ್ದ ಹಣ ತಮ್ಮ ಕಾರಿಗೆ ಶಿಫ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಅತಿದೊಡ್ಡ ದರೋಡೆ ಪ್ರಕರಣ ಇದಾಗಿದೆ. ಗೃಹ ಸಚಿವ ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಹೀಗಾಗಿ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದರೋಡೆಕೋರರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಡಿಸಿಪಿ ಲೋಕೇಶ್ ಜಗಲಾಸರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ದರೋಡೆಕೋರರ ಪತ್ತೆಗಾಗಿ ಬೆಂಗಳೂರು ನಗರದಾದ್ಯಂತ ನಾಕಾಬಂಧಿ ಹಾಕಲಾಗಿದೆ. ಗಡಿಪ್ರದೇಶದಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ಕಳ್ಳರನ್ನು ನಾವು ಖಂಡಿತಾ ಹಿಡಿಯುತ್ತೇವೆ. ಈಗಲಷ್ಟೇ ಪ್ರಕರಣದ ಲೀಡ್ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ಯಾರು? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರೋ, ಇಲ್ಲವೋ ಅನ್ನೋದು ಗೊತ್ತಿಲ್ಲ. ಈಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಖದೀಮರು ಪಕ್ಕಾ ಪ್ಲ್ಯಾನ್ ಮಾಡಿ ಈ ದರೋಡೆ ಮಾಡಿದ್ದಾರೆ. ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದರೋಡೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನಲಾಗಿದೆ. ಹೀಗಾಗಿ ಅಲ್ಲೇ ಕಾರು ನಿಲ್ಲಿಸಿದ್ದು, ಅದಾದ ನಂತರ ಬೇರೆ ಕಾರಿನಲ್ಲಿ ಬಂದ ಮೂವರು ದರೋಡೆಕೋರರ ಜತೆಗೆ ಮಾತುಕತೆ ಮಾಡಿದ್ದಾನೆ. ಅದಾದ ನಂತರ ಎಟಿಎಂ ವಾಹನವನ್ನು ಕಾರು ಫಾಲೋ ಮಾಡಿದೆ. ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಎಟಿಎಂ ವಾಹನ ನಿಲ್ಲಿಸಿ ಬಳಿಕ ಅದರಲ್ಲಿದ್ದ ಬರೋಬ್ಬರಿ 7.11 ಕೋಟಿ ರೂ. ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಇನ್ನು ಘಟನೆ ನಡೆದು 45 ನಿಮಿಷದಿಂದ 1 ಗಂಟೆ ತಡವಾಗಿ ಪೊಲೀಸರಿಗೆ ಮಾಹಿತಿ ತಲುಪಿಸಿರುವುದು ಕೂಡ ಹಲವು ಅನುಮಾನ ಹುಟ್ಟಿಸಿದೆ.
ಬೆಂಗಳೂರಿನಲ್ಲಿ ಹಾಡಹಾಗಲೇ ಕೋಟಿ ಕೋಟಿ ದರೋಡೆ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಶಂಕಿತರ ಫೋಟೋ ಬಿಡುಗಡೆ ಮಾಡಿದೆ. ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳ ಪತ್ತೆಗೆ ಖಾಕಿ ಹೈ ಅಲರ್ಟ್ ಆಗಿದ್ದು, ಪ್ರಾಥಮಿಕ ಮಾಹಿತಿ ಅನುನಾರ ಒಟ್ಟು 6 ಮಂದಿ ಆರೋಪಿಗಳ ಪೋಟೋ ಬಿಡುಗಡೆ ಮಾಡಿದೆ. ಹಳೆ ಆರೋಪಿಗಳು ಹಾಗು ಕೆಲ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದ್ದು, ನಾಕ ಬಂದಿಯಲ್ಲಿ ಈ ಫೋಟೋ ದಲ್ಲಿರೋ ವ್ಯಕ್ತಿಗಳ ಫೋಟೋ ಮ್ಯಾಚ್ ಮಾಡುವಂತೆ ಎಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು ಪೂರ್ವ(ಇಂದಿರಾನಗರ) RTO ಕಚೇರಿಯಲ್ಲಿ ನೊಂದಣಿ. ಜನವರಿ 2018 ರಲ್ಲಿ ಈ ಕಾರು ನೊಂದಣಿಯಾಗಿದೆ. ದರೋಡೆ ಮಾಡೋಕೆ ಅಂತಾನೆ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಲಾಗಿದೆ. ದರೋಡೆ ಮಾಡಿ ಪರಾರಿಯಾಗುವಾಗ ಸಿಕ್ಕಿಕೊಳ್ಳಬಾರದೆಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ. ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಬಳಕೆ ಮಾಡಲಾಗಿದೆ. ಪಿ.ಬಿ. ಗಂಗಾಧರನ್ ಅವರ ಹೆಸರಿನಲ್ಲಿ ಕಾರು ನೊಂದಣಿಯಾಗಿದೆ. ಬೆಂಗಳೂರಿನ ತಿಪ್ಪಸಂದ್ರ ವಿಳಾಸದಲ್ಲಿ ನೊಂದಣಿಯಾಗಿರುವ ಕಾರನ್ನು ಗರುಡಾ ಆಟೋ ಕ್ರಾಫ್ಟ್ ಲಿಮಿಟೆಡ್ ಶೋರೂಂನಿಂದ ಖರೀದಿ ಮಾಡಲಾಗಿದೆ. ಸ್ವಿಫ್ಟ್ VDI ಮಾಡೆಲ್ ನ ಸ್ವಿಫ್ಟ್ ಕಾರು. ಸಿಲ್ಕೀ ಬಣ್ಣದ ಭಾರತ್ ಸ್ಟೇಜ್ 4 ರ ಕಾರು. ಕಾರ್ ಮೇಲೆ ಗೌರ್ಮೆಂಟ್ ಆಫ್ ಇಂಡಿಯಾ ಅಂತ ಬರೆಯಲಾಗಿದೆ.
ಬೆಚ್ಚಿಬೀಳಿಸುವ ದರೋಡೆ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ನಾಕಾಬಂಧಿ ಹಾಕಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಮತ್ತು ಡಿಸಿಪಿಯಿಂದ ತನಿಖೆ ನಡೆಯುತ್ತಿದ್ದು, ಅವ್ರ ಬಳಿ ಇದ್ದ ಗನ್ ಯಾಕೆ ಬಳಕೆ ಮಾಡಿಲ್ಲ ಎನ್ನುವ ಪ್ರಶ್ನೆ ಇದೆ. ಈ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಸದ್ಯ ಚಾಲಕ, ಇಬ್ಬರು ಗನ್ ಮೆನ್ ಗಳು ಹಾಗೂ ಓರ್ವ ಹಣ ಡೆಪಾಸಿಟ್ ಮಾಡುವ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂದಿಸ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.



























