ಬೆಂಗಳೂರು, : ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ರೇಡಿಯಾಲಜಿಸ್ಟ್ ಜಯಕುಮಾರ್‌ನನ್ನು ಕೊನೆಗೂ ಬಂಧಿಸಲಾಗಿದೆ. ಮಹಿಳೆಯೊಬ್ಬರು ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ಸ್ಕ್ಯಾನಿಂಗ್ ಸೆಂಟರ್ ಗೆ ಬಂದಿದ್ದು, ಈ ವೇಳೆ ರೇಡಿಯಾಲಜಿಸ್ಟ್ ಜಯಕುಮಾರ್, ಸ್ಕ್ಯಾನಿಂಗ್ ಮಾಡುವ ವೇಳೆ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ವಿಚಾರ ಪೊಲೀಸರಿಗೆ ತಿಳಿಸಿದರೂ ಯಾವುದೇ ಕ್ರಮಗೊಂಡಿಲ್ಲ. ಕೊನೆಗೆ ಸ್ಥಳೀಯರು ಹಾಗೂ ಕರವೇ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಬಳಿಕ ಪೊಲೀಸರು ರೇಡಿಯಾಲಜಿಸ್ಟ್ ಜಯಕುಮಾರ್ ನನ್ನು ಅರೆಸ್ಟ್ ಮಾಡಿದ್ದಾರೆ.
10 ದಿನದ ಹಿಂದೆ ಮಹಿಳೆಯೊಬ್ಬರು ಹೊಟ್ಟೆ ನೋವೆಂದು ಪತಿಯೊಂದಿಗೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲೆಂದು ಆನೇಕಲ್ ಪಟ್ಟಣದ ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ಸ್ಕ್ಯಾನಿಂಗ್ ಸೆಂಟರ್ಗೆ ತೆರಳಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಾಡುವಾಗ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಜೊತೆಗೆ ಖಾಸಗಿ ಅಂಗಕ್ಕೆ ಕೈ ಹಾಕಿ, ಕಾಮಾಂಧ ಡಾಕ್ಟರ್ ವಿಕೃತಿ ಮೆರೆದಿದ್ದ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಹಾಕಿ, ಈ ವಿಚಾರ ಹೊರಗೆ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದ.
ಇನ್ನು ಈ ಘಟನೆಯನ್ನು ಮಹಿಳೆ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು, ಕೂಡಲೇ ಆನೇಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಆನೇಕಲ್ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿ ಬಿಟ್ಟು ಕಳುಹಿಸಿದ್ದರು.
ಈ ಸಂಬಂಧ ಕರವೇ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಆನೇಕಲ್ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ನಡೆದು ಹತ್ತು ದಿನ ಕಳೆದರೂ ಆರೋಪಿಯನ್ನು ಬಂಧನ ಮಾಡಿಲ್ಲ. ಈ ಕೂಡಲೇ ಆರೋಪಿಯನ್ನು ಬಂಧಿಸಬೇಕು. ಇಲ್ಲವಾದರೆ ಆನೇಕಲ್ ಪಟ್ಟಣ ಬಂದ್ ಮಾಡುವ ಎಚ್ಚರಿಕೆ ನೀಡಿದ್ದರು. ಹೋರಾಟಕ್ಕೆ ಮಣಿದ ಪೊಲೀಸರು ಆರೋಪಿ ಜಯಕುಮಾರ್‌ನನ್ನು ಅರೆಸ್ಟ್ ಮಾಡಿದ್ದಾರೆ.



























