ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ 5 ದಿನಗಳ ಲಕ್ಷದೀಪೋತ್ಸವವು ಬುಧವಾರ ರಾತ್ರಿ ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಸಂಪನ್ನಗೊಂಡಿದ್ದು, ಕೊನೆಯ ದಿನ ಲಕ್ಷಾಂತರ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಗುರುವಾರ ಸಂಜೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣ ಪೂಜೆ ನೆರವೇರಿತು.
ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನ. 15ರಂದು ಉತ್ಸವ ಆರಂಭಗೊಂಡಿದ್ದು, ಕೊನೆಯ ದಿನ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಗೌರಿಮಾರು ಕಟ್ಟೆ ಉತ್ಸವ ಆರಂಭಗೊಂಡಿತು.
ದೇಗುಲದ ಒಳಾಂಗಣದಲ್ಲಿ 16 ಸುತ್ತುಗಳ ಪ್ರದಕ್ಷಿಣೆಯ ಉತ್ಸವ ಬಲಿ ನಡೆದು ಬಳಿಕ ಉತ್ಸವಮೂರ್ತಿಯನ್ನು ಹೊರಾಂಗಣಕ್ಕೆ ತರಲಾಯಿತು.
ಉತ್ಸವ ಮೂರ್ತಿಯನ್ನು ಬೆಳ್ಳಿರಥದಲ್ಲಿ ಕುಳ್ಳಿರಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು.
ಬಳಿಕ ಬೆಳ್ಳಿರಥವನ್ನು ಭಕ್ತರ ಉದ್ವೇಷದೊಂದಿಗೆ ದೇವಸ್ಥಾನದ ಬಳಿಯಿಂದ ಕ್ಷೇತ್ರದ ಮುಖ್ಯದ್ವಾರ ಬಳಿಯ ಗೌರಿಮಾರು ಕಟ್ಟೆಗೆ ಎಳೆಯಲಾಯಿತು. ಕಟ್ಟೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಉತ್ಸವ ಮೂರ್ತಿಗೆ ವಿವಿಧ ಸೇವೆ ನೆರವೇರಿತು. ಮತ್ತೆ ಅಲ್ಲಿಂದ ರಥವನ್ನು ದೇವಸ್ಥಾನದ ಮುಂಭಾಗಕ್ಕೆ ತಂದು ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಉತ್ಸವ ಮೂರ್ತಿ ದೇಗುಲದ ಒಳಗೆ ಪ್ರವೇಶಿಸುವ ಮೂಲಕ ಲಕ್ಷದೀಪೋತ್ಸವ ಉತ್ಸವ ಸಂಪನ್ನಗೊಂಡಿತು.
ಉತ್ಸವದಲ್ಲಿ ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರು, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ದೇಗುಲದ ತಂತ್ರಿ ವರ್ಗ, ಅರ್ಚಕ ವೃಂದ ಲಕ್ಷಾಂತರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ : ಲಕ್ಷದೀಪೋತ್ಸವದ 6ನೇ ದಿನವಾದ ಗುರುವಾರ ಸಂಜೆ ಕ್ಷೇತ್ರ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನೆರವೇರಿತು. ಡಾ| ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಮಹೋನ್ನತ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಬಾಹುಬಲಿ ಸೇವಾ ಸಮಿತಿ ಹಾಗೂ ಧರ್ಮಸ್ಥಳದ ಶ್ರಾವಕ-ಶ್ರಾವಕಿಯರ ನೇತೃತ್ವದಲ್ಲಿ ಸಮವಸರಣ ಪೂಜೆ ನೆರವೇರಿತು. ಮಂಗಳೂರಿನ ಸುಕುಮಾರ್‌ಬಲ್ಲಾಳ್ ತಂಡದಿಂದ ಸಾಣೂರು ಶ್ರೀಧರ ಪಾಂಡಿ ವಿರಚಿತ ಯಕ್ಷಾಮೃತ ಕನಕಜ್ವಾಲೆ ಪ್ರದರ್ಶನಗೊಂಡಿತು.
ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರು, ವಿವಿಧ ಕಡೆಗಳಿಂದ ಆಗಮಿಸಿದ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು.




























