ನೆಲಮಂಗಲ: ಅವರಿಬ್ಬರು ಉನ್ನತ ಶಿಕ್ಷಣಕಾಗಿ ದೂರದ ಬೇರೆ ರಾಜ್ಯದಿಂದ ಬಂದಿದ್ದರು. ಜೋಡಿ ಹಕ್ಕಿತರ ಓಡಾಡಿಕೊಂಡಿದ್ದ ಪ್ರೇಮಿಗಳು ಮದುವೆಯಾಗುವ ಪ್ಲಾನ್ ಕೂಡ ಮಾಡಿದ್ದರು. ಭಾನುವಾರ ಬೆಳಿಗ್ಗೆ ಎಂದಿನಂತೆ ಚರ್ಚ್ಗೆ ಹೋಗಿ ಪ್ರಾರ್ಥನೆ ಮುಗಿಸಿ ಪಿಜಿಗೆ ವಾಪಸ್ ತೆರಳುತ್ತಿದ್ದರು. ಆದರೆ ಅದೇನಾಯಿತು ಏನೋ ರೈಲ್ವೆ ಹಳಿ ಮೇಲೆ ಇಬ್ಬರ ದೇಹ ಛಿದ್ರ ಛಿದ್ರವಾಗಿ ಬಿದ್ದಿತ್ತು.
19 ವರ್ಷದ ಸ್ಟೆರ್ಲಿನ್ ಎಲಿಜ ಶಾಜಿ ಮತ್ತು 20 ವರ್ಷದ ಜಸ್ಟಿನ್ ಮೃತ ಪ್ರೇಮಿಗಳು. ಇಬ್ಬರು ಸಹ ಕೇರಳ ಮೂಲದವರು. ಚಿಕ್ಕಬಾಣವರ ಬಳಿ ಇರುವ ಖಾಸಗಿ ಕಾಲೇಜ್ ಒಂದರಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ ಯಾರ ಕೆಟ್ಟ ದೃಷ್ಟಿ ಇವರ ಮೇಲೆ ಬಿತ್ತೋ ಗೊತ್ತಿಲ್ಲ, ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ವಂದೇ ಭಾರತ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಈ ಘಟನೆ ಮೊದಲಿಗೆ ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂದು ಸಾಕಷ್ಟು ಅನುಮಾನವನ್ನು ಸೃಷ್ಟಿಸಿತ್ತು. ವಂದೇ ಭಾರತ್ ಎಕ್ಸಪ್ರೆಸ್ನ ಸಿಸಿಟಿವಿ ಗಮನಿಸಿದ ಅಧಿಕಾರಿಗಳು, ಈ ವೇಳೆ ಇಬ್ಬರು ಹಳಿ ಮೇಲೆ ನಿಂತಿರುವುದು ಸ್ಪಷ್ಟವಾಗಿದೆ. ಅಲ್ಲಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳವುದಕ್ಕಾಗಿಯೇ ಹಳಿ ಮೇಲೆ ನಿಂತಿರುವುದು ಎಂಬ ಮಾಹಿತಿ ರೈಲ್ವೆ ಪೊಲಿಸರಿಗೆ ಸಿಕ್ಕಿದೆ. ಆದರೆ ಅದು ನಿಜನಾ, ಸುಳ್ಳಾ ಎಂಬುವುದು ಅಧಿಕೃತ ಮಾಹಿತಿಯಿಂದ ತಿಳಿಯಲಿದೆ.
ಇನ್ನು ಘಟನೆ ನಡೆಯುತ್ತಿದ್ದಂತೆ ಅಲ್ಲಿದ್ದ ಕೆಲ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮಾಡಿದ್ದಾರೆ. ನಿನ್ನೆ ಭಾನುವಾರ ಆಗಿದ್ದರಿಂದ ಇಬ್ಬರು ಚರ್ಚ್ಗೆ ಹೋಗಿದ್ದರು. ಪ್ರೇಯರ್ ಮುಗಿಸಿ ನಂತರ ವಾಪಸ್ ಆಗುವ ವೇಳೆ ಘಟನೆ ನಡೆದಿದೆ ಎಂದು ಗೊತ್ತಾಗಿದೆ.
ಸದ್ಯ ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸರು, ಮೃತಪಟ್ಟವರವ ಮೊಬೈಲ್ ಪರಿಶಿಲಿಸಲು ಮುಂದಾಗಿದ್ದಾರೆ. ಆದರೆ ರೈಲಿಗೆ ಸಿಕ್ಕಿ ಮೊಬೈಲ್ ಕೂಡ ಛಿದ್ರವಾಗಿದೆ. ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಿ ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ತಿಳಿಯಬೇಕಿದೆ.




























