ಕಡಬ: ಕಡಬ ತಾಲೂಕಿನ ಕೊಯಿಲ ಪ್ರದೇಶದಲ್ಲಿ ತಡರಾತ್ರಿ ನಡೆದ ಗಲಾಟೆ ಸ್ಥಳೀಯರನ್ನು ಬೆರಗುಗೊಳಿಸಿದೆ. ಡಿಸೆಂಬರ್ 3ರಂದು ರಾತ್ರಿ ಪಿರ್ಯಾದಿದಾರ ಬಾಬು ಗೌಡ ಅವರ ತಮ್ಮ ಹರೀಶ ಅವರ ಮನೆ ಬಳಿ ಜೋರಾಗಿ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಮನೆಯವರು ಹೊರಗೆ ಬಂದು ನೋಡಿದಾಗ, ಒಬ್ಬ ಅಪರಿಚಿತ ವ್ಯಕ್ತಿ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿರುವುದು ಪತ್ತೆಯಾಗಿದೆ.
ಮನೆಯ ಸದಸ್ಯರು ಆ ವ್ಯಕ್ತಿಯನ್ನು ತಡೆದುಕೊಳ್ಳಲು ಪ್ರಯತ್ನಿಸಿದಾಗ, ಆತ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚೇತನ್ ಎಂಬ ಯುವಕನ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಪಿರ್ಯಾದಿದಾರರು ಹಾಗೂ ಉಳಿದ ಕುಟುಂಬಸ್ಥರು ಆತನನ್ನು ಹಿಡಿದು ವಿಚಾರಿಸಿದಾಗ, ಆತ ಕಡಬ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ರಾಜು ನಾಯ್ಕ ಎಂಬುದು ತಿಳಿದು ಬಂದಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 86/2025ರಂತೆ BNS-2023ರ ಕಲಂ 329(3), 115(2), 331(6)ರಡಿ ಪ್ರಕರಣ ದಾಖಲಾಗಿದೆ. ಆರೋಪಿಯಾದ ಹೆಚ್.ಸಿ. ರಾಜು ನಾಯ್ಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಅವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆದಿದೆ. ಇದಲ್ಲದೆ, ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ತಕ್ಷಣ ಅವರನ್ನು ಕರ್ತವ್ಯದಿಂದ ಅಮಾನತ್ತು ಮಾಡಿದ್ದಾರೆ.
ಈ ಘಟನೆ ಕಡಬ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ



























