ವಿಟ್ಲ: ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಕಾಡಿ ಅವರ ಪತ್ನಿಯನ್ನು ಕಳುಹಿಸಿರುವ ವಿಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರೆಂದು ಪ್ರಧಾನ ಮಂತ್ರಿ ಕಚೇರಿಗೆ ಸುಳ್ಳು ಮಾಹಿತಿ ನೀಡಿ ಅವರನ್ನು ಮೋದಿಯವರ ಸ್ವಾಗತಕ್ಕೆ ಕಳುಹಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧವಾಗಿ ಚರ್ಚೆ ನಡೆಯುತ್ತಿದೆ.
ಸತೀಶ್ ಕುಂಪಲ ಈ ವಿಚಾರದ ಕುರಿತು ವಿಟ್ಲದಲ್ಲಿ ಪತ್ರ ಕರ್ತರ ಪ್ರಶ್ನೆಗೆ ‘ಪಕ್ಷದ ಓರ್ವ ಸಾಮಾನ್ಯ ಮಹಿಳಾ ಕಾರ್ಯಕರ್ತರಾಗಿರುವ ಎಂಎಲ್‌ಸಿ ಕಿಶೋರ್ ಅವರ ಪತ್ನಿಯನ್ನು ಪ್ರಧಾನಿಯವರ ಸ್ವಾಗತಕ್ಕೆ ಕಳುಹಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ.
ನಮ್ಮ ಮಹಿಳಾ ಮೋರ್ಚಾದಲ್ಲಿ ಕೆಲಸಮಾಡಿರುವ, ಶಿಶೋರ್ ಅವರ ಹೆಂಡತಿಯನ್ನು ಮೋದಿಯವರ ಸ್ವಾಗತಕ್ಕೆ ಕಳುಹಿಸಿರುವುದನ್ನು ಜಿಲ್ಲಾಧ್ಯಕ್ಷನಾಗಿ ಸಮರ್ಥನೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ವಿವಾದ ಮಾಡುವವರಿಗೆ ಏನೂ ಹೇಳಲಿಕ್ಕಾಗುವುದಿಲ್ಲ. ಆದರೆ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಮೋದಿಯವರ ಅಥವಾ ಬೇರೆ ಯಾವುದಾದರೂ ಈ ರೀತಿಯ ಪಾರ್ಟಿಯ ವ್ಯವಸ್ಥೆ ಬಂದಾಗ ಕಳುಹಿಸಬೇಕು ಎನ್ನುವ ವಾದ ಇದೆ. ಅದರ ಪರವಾಗಿ ನಾನೂ ಇದ್ದೇನೆ. ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು ಎಂದು ಯಾರಾದರೂ ಹೇಳಿದರೆ ಅದು ಸರಿಯಿದೆ. ನಾನೂ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಂದವ ಕಿಶೋರ್ ಕುಮಾರ್ ಅವರ ಪತ್ನಿ ನಿನ್ನೆ ಮಹಿಳಾ ಮೋರ್ಚಾದ ಸಭೆಗೆ ಬಂದಿದ್ರು. ನಾನೂ ಪಾರ್ಟಿಗೋಸ್ಕರ ಕೆಲಸ ಮಾಡಿದವಳು.ನಾನು ಈ ಪಾರ್ಟಿಯ ವ್ಯವಸ್ಥೆಯಲ್ಲಿ ಇರುವವಳು. ನಾನು ಮೋದಿಯವರಿಗೆ ನಮಸ್ಕಾರ ಮಾಡಲು ಹೋದದ್ದನ್ನೇ ಇಷ್ಟು ದೊಡ್ಡ ವಿವಾದ ಮಾಡಿ ನನ್ನ ಫೋಟೋವನ್ನು ಈ ರೀತಿ ವೈರಲ್ ಮಾಡುವುದಾದರೆ ನನ್ನ ಮನಸ್ಸಿಗೆಷ್ಟು ಘಾಸಿಯಾಗಿರಬಹುದು ಎಂದು ಸಭೆಯಲ್ಲಿ ಅವರು ಭಾರೀ ದುಃಖ ವ್ಯಕ್ತಪಡಿಸಿದರು.
ಕಿಶೋರ್ ಅವರ ಹೆಂಡತಿ ನಮ್ಮ ಪಾರ್ಟಿಯೊಟ್ಟಿಗೆ ಕೆಲಸ ಮಾಡಿಕೊಂಡಿರುವವರು. ಅವರೇನೂ ಕ್ರಿಮಿನಲ್ ಅಲ್ಲ.ಅವರ ಮೇಲೆ ದರೋಡೆ ಕೇಸ್, ದೇಶವಿರೋಧಿ ಕೃತ್ಯ ಮಾಡಿದ ಕೇಸ್ ಇರುವವರಲ್ಲ. ಏನೂ ಇಲ್ಲದ ಒಬ್ಬ ಸಾಮಾನ್ಯ ಮಹಿಳೆಯನ್ನು ಮೋದಿಯವರ ಸ್ವಾಗತ ಮಾಡಲು ಕಳುಹಿಸಿದ್ದನ್ನು ದೊಡ್ಡ ವಿವಾದ ಮಾಡುವವರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದ ಸತೀಶ್ ಕುಂಪಲ, ಅನಾವಶ್ಯಕವಾಗಿ ಈ ರೀತಿಯ ವಿವಾದ ಮಾಡುವುದಕ್ಕಿಂತ ಮುಂದೆ ಈ ರೀತಿ ಇನ್ನೂ ಅನೇಕ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು ಎಂದು ಯಾರಾದರೂ ಹೇಳಿದರೆ ಅದನ್ನು ಅತ್ಯಂತ ಪ್ರೀತಿಯಿಂದ ಸ್ವಾಗತ ಮಾಡ್ತೇನೆ ‘ ಎಂದರು.
ಇದು ಉಡುಪಿಯ ಕಾರ್ಯಕ್ರಮವಾಗಿದ್ದ ಕಾರಣ ಮೇಜರ್ ಪೋರ್ಷನ್ ಅಲ್ಲಿಯವರೇ ನಿಭಾಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲವರಿಗೆ ಅವಕಾಶವನ್ನು ನೀಡಲಾಗಿದೆ. ಅದರಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಕೊಟ್ಟಿರುವ ಕೆಲಸ ಮಾಡಿದ್ದೇವೆ. ನಮ್ಮ ಮಹಿಳಾ ಮೋರ್ಚಾದಲ್ಲಿ ಕೆಲಸ ಮಾಡುವ, ವಿಧಾನ ಪರಿಷತ್ ಸದಸ್ಯರ ಪತ್ನಿಯನ್ನು ಕಳುಹಿಸಿರುವುದನ್ನು ಜಿಲ್ಲಾಧ್ಯಕ್ಷನಾಗಿ ಸಮರ್ಥನೆ ಮಾಡುತ್ತೇನೆ. ಇದರಲ್ಲಿ ಯಾವುದೇತಪ್ಪುಗಳನ್ನು ನಾನು ಮಾಡಿಲ್ಲ. ಏಕೆಂದರೆ ಅವರು ಕ್ರಿಮಿನಲ್ ಅಲ್ಲ ಸಂಸ್ಕಾರವಂತ ಕುಟುಂಬದಿಂದ ಬಂದಿರುವ ಎಂಎಲ್‌ಸಿ ಕಿಶೋರ್ ಅವರ ಹೆಂಡತಿ’ ಎಂದು ಕುಂಪಲ ಹೇಳಿದರು.
ಬಿಜೆಪಿ ಪದಾಧಿಕಾರಿಗಳಾಗಿದ್ದು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡ ಮೂವರನ್ನು ಪಕ್ಷದಿಂದ ಹೊರ ಹಾಕಲಾಗಿದೆಯಾ ಅಥವಾ ಈಗಲೂ ಪಕ್ಷದಲ್ಲೇ ಇದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್ ಕುಂಪಲ, ‘ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನವಿಟ್ಟು, ಪ್ರೀತಿಯಿಟ್ಟು, ಬಿಜೆಪಿಯ ವ್ಯವಸ್ಥೆಗೆ ಅನುಗುಣವಾಗಿ ಯಾರೆಲ್ಲಾ ಕೆಲಸ ಮಾಡುತ್ತಾರೋ ಅವರನ್ನು ಹೊರಗೆ ಹಾಕುವ ಪ್ರಶ್ನೆಯಿಲ್ಲ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೂ ಇಲ್ಲ.ಸಂಘಟನಾತ್ಮಕ ವ್ಯವಸ್ಥೆಯಡಿ ಕೆಲಸ ಮಾಡುವ ಎಲ್ಲರಿಗೂ ಅವಕಾಶಗಳಿದೆ’ ಎಂದರು.
ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲವನ್ನು ಒಂದು ಮಾಡಿಕೊಟ್ಟರೆ ನಾನು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದ ಎಂದು ಅರುಣ್ ಕುಮಾರ್ ಪುತ್ತಿಲ ಅವರು ಹೇಳಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ‘ಭಾರತೀಯ ಜನತಾ ಪಾರ್ಟಿಯ ಎರಡೂ ಮಂಡಲಗಳಿಗೂ ಈಗಾಗಲೇ ದಯಾನಂದ ಶೆಟ್ಟಿ ಉಜಿರೆಮಾರ್ ಮತ್ತು ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಒಮ್ಮೆ ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಅವರಿಗೆ ಮೂರು ವರ್ಷದ ಅವಧಿ ಇರುತ್ತದೆ. ಆದ್ದರಿಂದ ಆ ಪ್ರಶ್ನೆ ಬರೋದಿಲ್ಲ. ಅವರು ಅಧ್ಯಕ್ಷರಾಗಿ ಒಳ್ಳೆಯ ಕೆಲಸಮಾಡ್ತಾ ಇದ್ದಾರೆ’ ಎಂದರು.
ಪುತ್ತಿಲರಿಗೆ ಈ ಹಿಂದೆ ಸ್ಥಾನಮಾನದ ಭರವಸೆ ನೀಡಲಾಗಿತ್ತಾ ಎಂದು ಕೇಳಿದಾಗ,’ ಬಿಜೆಪಿಯಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತನಿಂದ ಜವಾಬ್ದಾರಿ ಇರುವ ಕಾರ್ಯಕರ್ತರ ತನಕ ಪಾರ್ಟಿಯ ಜೊತೆ ಸಂಘಟನಾತ್ಮಕವಾಗಿ ಕೆಲಸ ಮಾಡುವ ಯಾರಿಗೂ ಇಂಥದ್ದೇ ಪೋಸ್ಟ್ ಎಂದು ಹೇಳಿ ಯಾರೂ ಕೆಲಸ ಮಾಡೋದಿಲ್ಲ.
ಪಾರ್ಟಿಯಲ್ಲಿ ಕೆಲಸ ಮಾಡ್ತಾ ಮಾಡ್ತಾ ಅವರಿಗೆ ಏನೇನು ಸ್ನಾನಮಾನ ಸಿಗ್ಬೇಕೋ ಅದು ಸಿಗುತ್ತದೆ.
ನಾನೂ ಕೂಡಾ ಕೆಲಸ ಮಾಡ್ತಾ ಮಾಡ್ತಾ ಜಿಲ್ಲಾಧ್ಯಕ್ಷನಾಗಿದ್ದೇನೆ ಹೊರತು ಯಾರೂ ನನಗೆ ಇಂಥದ್ದೇ ಸ್ಥಾನ ಕೊಡ್ತೇನೆಂದು ಹೇಳಿ ಬಂದದ್ದಲ್ಲ. ಯಾರೂ ಬರೋದೂ ಇಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.



























