ಪುತ್ತೂರು: ಅದೊಂದು ಒಂಟಿ ವೃದ್ಧ ಜೀವ. ಅಜ್ಜಿಯೊಂದಿಗೆ ಇರುವುದು ನಾಲ್ಕು ಮುದ್ದಿನ ನಾಯಿ ಮರಿಗಳು ಮಾತ್ರ. ಆ ಹಿರಿಯಜ್ಜಿಯ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ. ಬೆಳಕೇ ಕಾಣದ ಮನೆ ಸದಾ ಕತ್ತಲು. ವಯೋ ಸಹಜವಾಗಿ ಅಜ್ಜಿಗೆ ಕಣ್ಣೂ ಕಾಣುತ್ತಿಲ್ಲ. ಮನೆಯೂ ನಾದುರಸ್ತಿಯಲ್ಲಿದೆ. ಪ್ರತೀ ಚುನಾವಣೆ ಬಂದಾಗಲೂ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಈ ಮನೆಗೂ ಬರ್ತಾರೆ. ‘ಅಪ್ಪಿ ಅಕ್ಕ ಈ ಸರ್ತಿ ನಂಕೇ ಕೊರ್ಲೆ’ ಎನ್ನುತ್ತಾರೆ. ಮತ್ತೆ ಅವರು ಬರುವುದು ಮತ್ತೊಂದು ಚುನಾವಣೆ ಬಂದಾಗಲೇ. ಅಪ್ಪಿಯವರ ನೋವು, ಗೋಳು ಕೇಳಲು ಯಾರೂ ಮುಂದೆ ಬರುವುದಿಲ್ಲ. ಹಿರಿಯ ನಾಗರಿಕರನ್ನು ಪ್ರೀತಿಸಿ ಎನ್ನುವುದು ಇಲಾಖೆಯ ಸ್ಲೋಗನ್ ಗೆ ಮಾತ್ರ ಸೀಮಿತವಾಗಿದೆ. ಮಳೆ ಇರಲಿ… ಬಿಸಿಲಿರಲಿ…ಈ ಅಜ್ಜಿ ತಾನಾಯಿತು, ತನ್ನ ಮುದ್ದಿನ ನಾಯಿ ಮರಿಗಳಾಯಿತು ಎಂದು ಜೀವಿಸುತ್ತಿದ್ದಾರೆ. ಅಜ್ಜಿಯ ಆರೈಕೆ ಮಾಡುವವರಿಲ್ಲ. ಅವರ ಆರೋಗ್ಯ ವಿಚಾರಿಸುವವರಿಲ್ಲ. ಇಂತಹ ದೃಶ್ಯ ಕಾಣುತ್ತಿರುವುದು ಯಾವುದೋ ಕುಗ್ರಾಮದಲ್ಲಿ ಅಲ್ಲ. ಪುತ್ತೂರು ಪೇಟೆಗೆ ಹತ್ತಿರದಲ್ಲಿರುವ ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ವಾರ್ಡ್‌ನ ತಾರಿಗುಡ್ಡೆಯಲ್ಲಿ.
ಅನಾಥ ಪ್ರಜ್ಞೆಯಲ್ಲಿರುವ ಅಪ್ಪಿ ಅಜ್ಜಿಯ ಒಬ್ಬಂಟಿ ಬದುಕಿನ ನರಳಾಟ ಕಂಡು ಅವರ ಕಷ್ಟಕ್ಕೆ ಕೈ ಜೋಡಿಸಬೇಕು ಎಂದು ಇದೀಗ ನಿರ್ಧರಿಸಿರುವ ಇಲ್ಲಿನ ಅಭಿರಾಮ್ ಫ್ರೆಂಡ್ಸ್ ಎಂಬ ಯುವಕರ ತಂಡ ಅಪ್ಪಿಯವರ ನೋವಿಗೆ ಸ್ಪಂದಿಸಲು ಮುಂದಾಗಿದೆ. ಪ್ರಥಮ ಹಂತದಲ್ಲಿ ಈ ಮನೆಯ ಪರಿಸರವನ್ನು ಸ್ವಚ್ಛಗೊಳಿಸಿದೆ. ಮನೆಯನ್ನೂ ಶುಚಿ ಮಾಡಿದೆ. ಚಿಮಿಣಿ ದೀಪದಲ್ಲಿ ಬದುಕು ಸಾಗಿಸುತ್ತಿರುವ ಅಪ್ಪಿಯವರ ಮನೆಗೆ ಬೆಳಕು ಒದಗಿಸಬೇಕೆಂದು ಪಣ ತೊಟ್ಟಿದೆ.
ಮನೆಯ ಮಾಡು ದುರಸ್ತಿ ಪಡಿಸಿ ಮನೆಯೊಳಗೆ ಮಳೆಯ ನೀರು ಹೋಗದಂತೆ ಟರ್ಪಾಲು ಹೊದಿಸಿದೆ. ಅವರ ದಿನನಿತ್ಯದ ಅಗತ್ಯಕ್ಕೆ ಬೇಕಾದ ಸಾಮಾಗ್ರಿಗಳನ್ನು ಒದಗಿಸಲೂ ಅಭಿರಾಮ್ ಫ್ರೆಂಡ್ಸ್ ಮುಂದಾಗಿದೆ. ಯುವಕರ ತಂಡ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನಷ್ಟು ಮಂದಿ ನೆರವು ನೀಡಲು ಮುಂದೆ ಬರಬೇಕಿದೆ ಎಂದು ಅಭಿರಾಮ್ ತಂಡ ವಿನಂತಿಸಿದೆ.