ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್‌ಗೆ ಕಾಯ್ದಿರಿಸಿದ ಜಾಗವನ್ನು ಮಸೀದಿಯ ದಫನ ಭೂಮಿಗೆ ನೀಡಿ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಾಡಿರುವ ನಿರ್ಣಯದ ವಿರುದ್ಧ ಗ್ರಾಮ ಪಂಚಾಯತ್ ಎದುರುಗಡೆ ಪಾಣಾಜೆ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಶ್ರಮಿಸಬೇಕಾಗಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಸರ್ವಾದಿಕಾರಿ ಧೋರಣೆಯ ಮೂಲಕ ಗ್ರಾಮ ಪಂಚಾಯತಿಗೆ ಕಾಯ್ದಿರಿಸಿದ ಜಾಗವನ್ನು ಧಪನ ಭೂಮಿಗೆ ನೀಡಬೇಕು ಎಂದು ನಿರ್ಣಯ ಮಾಡಿ ಪಾಣಾಜೆ ಗ್ರಾಮಸ್ಥರಿಗೆ ದ್ರೋಹದ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ ಕರ್ತವ್ಯ ಮಾಡುವುದನ್ನು ಬಿಟ್ಟು ದ್ವೇಷ ಅಸೂಯೆಯ ಮೂಲಕ ಪಾಣಾಜೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಿಸಲು ದಫನ ಭೂಮಿಗೆ ಭೂಮಿ ಕೊಡುವ ನಿರ್ಣಯ ಮಾಡಿರುವುದು ಅವರ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಹಿಂದೂ ರುದ್ರಭೂಮಿಗೆ ಕೊಡಬೇಕೆಂದು ಹಿಂದೂಗಳು ಯಾರು ಕೇಳಿಲ್ಲ. ಆದುದರಿಂದ ದಫನ ಭೂಮಿಗೆ ಭೂಮಿಯನ್ನು ಕೊಡುವ ಅವಶ್ಯಕತೆ ಏನಿದೆ? ಈ ನಿರ್ಣಯದ ವಿರುದ್ಧ ಗ್ರಾಮಸ್ಥರು ಮೇಲಾಧಿಕಾರಿಗೆ ದೂರು ಕೊಡಲಿದ್ದಾರೆ. ಕಾಂಗ್ರೆಸ್‌ನವರ ಈ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದ ಪ್ರಯತ್ನಕ್ಕೆ ಮುಂದಿನ ದಿನಗಳಲ್ಲಿ ನಿಮ್ಮ ಅಧಿಕಾರದ ಶವಪೆಟ್ಟಿಗೆಗೆ ಇದು ಅಂತಿಮ ಮೊಳೆ ಹೊಡೆದಿದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪಾಣಾಜೆ ಪಂಚಾಯತ್ ಅಧ್ಯಕ್ಷರು ಏಕಾಏಕಿ ಒಂದು ನಿರ್ಣಯವನ್ನು ಸರ್ವಾಧಿಕಾರಿ ಧೋರಣೆಯಲ್ಲಿ ತೆಗೆದುಕೊಂಡಿರುವುದು ರಾಜಕೀಯ ಪ್ರೇರಿತವಾಗಿದೆ. ಸರ್ವ ಜನರ ಹಿತವನ್ನು ಬಯಸುವ ಗ್ರಾಮದ ಸರಕಾರದಲ್ಲಿ ಜಾತ್ಯಾತೀತ ಎನ್ನುವ ಪಕ್ಷವೊಂದು ಪಂಚಾಯತ್ ಜಾಗವನ್ನು ಖಾಸಗಿ ಸಂಸ್ಥೆಗೆ ಕೊಡುವ ಹುನ್ನಾರದಿಂದ ಯಾವ ರೀತಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ ಎಂಬುದು ತಿಳಿದಿದೆ ಎಂದರು. ಈ ನಿರ್ಣಯ ಮಾಡಿರುವುದು ನೂರಕ್ಕೆ ನೂರು ಕಾನೂನು ಬಾಹಿರ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಆದುದರಿಂದ ತಾಲೂಕು ಪಂಚಾಯತ್ ಇಒ ರವರು ಈ ನಿರ್ಣಯವನ್ನು ಅನೂರ್ಜಿತಗೊಳಿಸಿ ಪಂಚಾಯತ್‌ಗೆ ಪಹಣಿ ಮಾಡಿಕೊಡಬೇಕು. ಅಲ್ಲದೆ ಕಾನೂನು ಬಾಹಿರವಾಗಿ ಕಟ್ಟಿದ ಕಟ್ಟಡದ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ ಪಾಣಾಜೆಯಲ್ಲಿ ಇಷ್ಟರವರೆಗೆ ಧರ್ಮಾಧಾರಿತ ರಾಜಕಾರಣ ಯಾವ ಪಕ್ಷದವರು ಮಾಡಿಲ್ಲ, ಎಲ್ಲರನ್ನು ಸಮಾನತೆಯಿಂದ ನೋಡಿದ್ದಾರೆ. ಪಂಚಾಯತ್ ಸದಸ್ಯರ ವಿರೋಧವಿದ್ದರೂ ಅದನ್ನು ಕಡೆಗಣಿಸಿ ಒತ್ತಾಯ ಪೂರ್ವಕವಾಗಿ ಈ ಜಾಗದಿಂದ ಧಪನ ಭೂಮಿಗೆ ಕೊಡಲು ಪಿಡಿಒ ಮೂಲಕ ಅಧ್ಯಕ್ಷರು ನಿರ್ಣಯ ಬರೆಯಿಸಿರುವುದು ಸಂವಿಧಾನ ವಿರೋಧಿ, ಸರ್ವಾಧಿಕಾರ ಧೋರಣೆಯಾಗಿದೆ, ಈ ನಿರ್ಣಯವನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ಗ್ರಾಮಸ್ಥರಾದ ರಮಾನಾಥ ರೈ ಪಡ್ಯಂಬೆಟ್ಟು ಮಾತನಾಡಿ 5 ವರ್ಷದಿಂದ ಅಧಿಕಾರದ ಸ್ವಾದ ಅನುಭವಿಸಿ ಅಧಿಕಾರದ ಕೊನೆಯಲ್ಲಿ ಜಾಗವನ್ನು ಇನ್ನೊಬ್ಬರಿಗೆ ಕೊಡುವ ಕೆಲಸ ಮಾಡಿದ್ದಾರೆ ಇದು ಖಂಡನೀಯ. ಪಂಚಾಯತ್‌ನ ಆಸ್ತಿಯನ್ನು ರಕ್ಷಿಸುವ ಕೆಲಸ ಪಿಡಿಒ ಅಧ್ಯಕ್ಷರು ಹಾಗೂ ಸದಸ್ಯರದ್ದಾಗಿದೆ. ಈ ನಿರ್ಣಯವನ್ನು ರದ್ದುಗೊಳಿಸಿ ನ್ಯಾಯ ದೊರಕಿಸಬೇಕು. ಈ ಹೋರಾಟಕ್ಕೆ ನಿಮ್ಮೊಂದಿಗೆ ನಾನು ಯಾವಾಗಲೂ ಇದ್ದೇನೆ ಎಂದರು.
ಪ್ರತಿಭಟನಾ ಬಳಿಕ ಗ್ರಾಮಸ್ಥರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಿದರು.
























