ಉಪ್ಪಿನಂಗಡಿ: ದೇವಾಲಯಕ್ಕೆ ಹಾಲು ಪಾಯಸದ ಸೇವೆ ಮಾಡಿಸಲು ಬಂದ ಯುವತಿಗೆ, ವಾಮಚಾರ ಮಾಡಲಾಗಿದೆ. ಅದಕ್ಕೆ ಪರಿಹಾರ ಮಾಡಬೇಕೆಂದು ಮನೆಯವರ ಮನೆ ಒಲಿಸಿದ ಅರ್ಚಕನೋರ್ವ ಬಳಿಕ ಆಕೆಯನ್ನು ತನಗೆ ನೀಡಿ ಮದುವೆ ಮಾಡಿಕೊಡಬೇಕೆಂದು ಹೇಳಿದ್ದಲ್ಲದೆ, ಮನೆಯವರು ಒಪ್ಪದಿದ್ದಾಗ ಆಕೆಗೆ ನಾನಾ ಕಿರುಕುಳ ಕೊಟ್ಟ ಆರೋಪದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ತುರ್ಕಜೆಯಲ್ಲಿ ನಡೆದಿದೆ.
ಇಲ್ಲಿನ ಸ್ಥಳೀಯ ದೇವಾಲಯವೊಂದರಲ್ಲಿ ಕೆಲಸದಲ್ಲಿದ್ದ ಮೂಲತಃ ಶಿರಸಿ ಮೂಲದ ಶಿವಗಿರಿ ಈ ಪ್ರಕರಣದ ಆರೋಪಿ.
ನರ್ಸಿಂಗ್ ಕಲಿಯುತ್ತಿರುವ ತುರ್ಕಜೆಯ ಯುವತಿಯೋರ್ವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ ಮನೆಯವರು ಸ್ಥಳೀಯ ದೇವಸ್ಥಾನವೊಂದಕ್ಕೆ ಹಾಲು ಪಾಯಸದ ಸೇವೆ ನೀಡುವುದಾಗಿ ಸಂಕಲ್ಪಿಸಿ ಅಲ್ಲಿಗೆ ಹರಕೆ ತೀರಿಸಲು ಯುವತಿಯೊಂದಿಗೆ ತೆರಳಿದ್ದರು.
ಆಗ ಅಲ್ಲಿದ್ದ ಅರ್ಚಕ ಶಿವಗಿರಿ ಎಂಬಾತ ಆಕೆಯ ಜಾತಕವನ್ನು ನೋಡಿ ನಿಮ್ಮ ಮಗಳಿಗೆ ವಾಮಾಚಾರ ಮಾಡಲಾಗಿದೆ. ಅದನ್ನು ತೆಗೆಯಬೇಕೆಂದು ಹೇಳಿ ಅದಕ್ಕೆ ಬೇಕಾದ ವಸ್ತುಗಳನ್ನು ತರಲು ಈಕೆಯ ಮನೆಯವರಲ್ಲಿ ಹೇಳಿದ್ದ. ಅದರಂತೆ ಅವರು ಅದನ್ನು ತಂದು ಕೊಟ್ಟಾಗ ಮಾಮಾಚಾರ ತೆಗೆಯುವಂತೆ ಮಾಡಿದ್ದ ಆ ಬಳಿಕದ ಬೆಳವಣಿಗೆಯಲ್ಲಿ ಈತ ಈಕೆಯ ಮನೆಯವರಲ್ಲಿ ನಾನು ನಿಮ್ಮ ಮಗಳನ್ನು ಇಷ್ಟ ಪಟ್ಟಿದ್ದೇನೆ. ನನಗೆ ಆಕೆಯನ್ನು ಮದುವೆ ಮಾಡಿ ಕೊಡಬೇಕೆಂದು ಹೇಳಿದಾಗ, ನಾವು ಬಿಲ್ಲವರು. ನೀವು ಬ್ರಾಹ್ಮಣ ಜಾತಿಯವರು ಆದ್ದರಿಂದ ಆಕೆಯನ್ನು ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದಿದ್ದರಂತೆ.
ಆದರೂ ಆತ ಆ ಯುವತಿಯಿದ್ದ ಹಾಸ್ಟೇಲ್‌ಗೆ ಹೋಗಿ ಆಕೆಯನ್ನು ವಿಚಾರಿಸುವುದು, ಯುವತಿಯ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದರೆನ್ನಲಾಗಿದೆ.
ಒಂದು ದಿನ ರಾತ್ರಿ ಇವರ ಕೊಟ್ಟಿಗೆಗೆ ಬೆಂಕಿ ಹಚ್ಚಲಾಗಿದ್ದು, ಆ ಕೃತ್ಯವನ್ನು ಈತನೇ ನಡೆಸಿರಬಹುದೆಂದು ಆರೋಪಿಸಿ ಈತನ ಮೇಲೆ ಯುವತಿಯ ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಈತನನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಟ್ಟಿದ್ದರು. ಅಲ್ಲದೇ, ಮನೆಯವರಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲು ಸೂಚಿಸಿದ್ದರು. ಅದರಂತೆ ಮನೆಯವರು ಸಿ.ಸಿ. ಕ್ಯಾಮರಾವನ್ನೂ ಅಳವಡಿಸಿದ್ದರು. ಈ ಮಧ್ಯೆ ಒಂದು ದಿನ ಮಧ್ಯ ರಾತ್ರಿ ಕೈಯಲ್ಲೊಂದು ತಲವಾರು, ಟಾರ್ಚ್ ಲೈಟ್ ಹಿಡಿದುಕೊಂಡು ಇವರ ಮನೆಯ ಹಟ್ಟಿಗೆ ಎಂಟ್ರಿ ಕೊಟ್ಟಿದ್ದ.
ಆಗ ಹಟ್ಟಿಯಲ್ಲಿದ್ದ ದನಗಳು ಇವನನ್ನು ಒಳನುಗ್ಗಲು ಬಿಡದಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಕೋಣೆಗೆ ತೆರಳಿ ಅಲ್ಲಿ ಕೆಲ ಹೊತ್ತು ಇದ್ದು ಮತ್ತೆ ವಾಪಾಸ್ ಮರಳಿದ್ದ. ದೃಶ್ಯ ಮನೆಗೆ ಅಳವಡಿಸಿದ್ದ ಸಿ.ಸಿ. ಕ್ಯಾಮರಾದಲ್ಲೂ ಸೆರೆಯಾಗಿತ್ತು.
ಈ ಬಗ್ಗೆ ಮನೆಯವರು ಮತ್ತೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿ ಈತ ವಾಮಾಚಾರ ನಡೆಸಲು ಬಂದಿದ್ದಾನೆ. ಯುವತಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಗಳನ್ನು ಹಾಕಿದ್ದಾನೆ ಎಂದು ದೂರಿದ್ದರು. ಈ ನಡುವೆ ಯುವತಿಗೆ ವಿಷಯ ತಿಳಿದು ದೇವಸ್ಥಾನದಿಂದ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು ಎಂದು ವರದಿಯಾಗಿದೆ.
ಯುವತಿ ಮನೆಯವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಈತನನ್ನು ಶಿರಸಿಯಲ್ಲಿ ವಶಕ್ಕೆ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಸದ್ಯ ಈತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
























