ಪುತ್ತೂರು:ಕೊಂಬೆಟ್ಟಿನಲ್ಲಿರುವ ನಿವೃತ್ತ ಪ್ರಾಂಶುಪಾಲರೋರ್ವರ ಮನೆಗೆ ಹೆಲೈಟ್ ಧರಿಸಿ ಒಳನುಗ್ಗಿದ ವ್ಯಕ್ತಿಗಳಿಬ್ಬರು ದರೋಡೆಗೆ ಯತ್ನಿಸಿದ ಘಟನೆ ಡಿ.17ರಂದು ನಡೆದ ಬಗ್ಗೆ ವರದಿಯಾಗಿದೆ.
ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಎ.ವಿ.ನಾರಾಯಣ ಅವರ ಪತ್ನಿ ನಿವೃತ್ತ ಪ್ರಾಧ್ಯಾಪಕಿ ವತ್ಸಲಾ ಅವರು ಡಿ.17ರಂದು ರಾತ್ರಿ ವೇಳೆ ಊಟ ಮಾಡಿ ಮನೆಯೊಳಗೆ ಕೂತಿದ್ದರು. ಈ ವೇಳೆ ಮನೆಯ ಎದುರು ಬಾಗಿಲು ಹಾಕಲಾಗಿತ್ತು.ತೆರೆದುಕೊಂಡಿದ್ದ ಹಿಂಬಾಗಿಲ ಮೂಲಕ ರಾತ್ರಿ 9.55ರ ಸುಮಾರಿಗೆ ಇಬ್ಬರು ಹೆಲೈಟ್ ಧಾರಿ ವ್ಯಕ್ತಿಗಳು ಮನೆಯ ಒಳಗಡೆ ಪ್ರವೇಶಿಸಿದ್ದರು.
ಈ ಪೈಕಿ ಓರ್ವ, ಕುರ್ಚಿಯಲ್ಲಿ ಕುಳಿತುಕೊಂಡಿದ್ದ ವತ್ಸಲಾರಾಜ್ ಅವರ ಬಳಿಗೆ ಹೋಗಿ ಅವರ ಬಾಯಿ ಮತ್ತು ಕಣ್ಣನ್ನು ಕೈಗಳಿಂದ ಮುಚ್ಚಿ ಒತ್ತಿ ಹಿಡಿದಾಗ ಅವರು ಕುರ್ಚಿಯಿಂದ ಕೆಳಗಡೆ ಬಿದ್ದು ಜೋರಾಗಿ ಬೊಬ್ಬೆ ಹೊಡೆದರು.
ಅದೇ ವೇಳೆ ಇನ್ನೋರ್ವ ಅಪರಿಚಿತ, ಎ.ವಿ.ನಾರಾಯಣ ಅವರ ಬಳಿಗೆ ಬಂದು ಆತನ ಕೈಗಳಿಂದ ಅವರ ಕಣ್ಣು ಮತ್ತು ಬಾಯಿಯನ್ನು ಒತ್ತಿಹಿಡಿದಿದ್ದ.
ಈ ವೇಳೆ ಎ.ವಿ.ನಾರಾಯಣ ಅವರು ಅಪರಿಚಿತನನ್ನು ದೂಡಿ ಜೋರಾಗಿ ಬೊಬ್ಬೆ ಹೊಡೆದರು. ಬೊಬ್ಬೆಯಿಂದಾಗಿ ಹೆದರಿದ ಅಪರಿಚಿತರು ಮನೆಯ ಹಿಂಬಾಗಿಲ ಮೂಲಕ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ.
ಘಟನೆಯಿಂದಾಗಿ ವತ್ಸಲಾ ಅವರ ತುಟಿಗೆ ಗಾಯವಾಗಿದೆ.ಮನೆಯಲ್ಲಿ ಯಾವುದೇ ಸೊತ್ತುಗಳು ಕಳ್ಳತನವಾಗಿರುವುದಿಲ್ಲ ಎಂದು ಎ.ವಿ.ನಾರಾಯಣ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಬಳಿಕ ಎ.ವಿ.ನಾರಾಯಣ ಅವರು ಅಣ್ಣ ಎ.ವಿ.ನರಸಿಂಹ ಅವರ ಮಗ ಎ.ಎನ್.ಶಶಿಧರ್ ಅವರಿಗೆ ಮೊಬೈಲ್ ಕರೆ ಮಾಡಿ ವಿಚಾರ ತಿಳಿಸಿದ್ದು ಬಳಿಕ ಅವರು ಮನೆಗೆ ಬಂದು ಮಾಹಿತಿ ಪಡೆದುಕೊಂಡಿದ್ದರು.
ಎ.ವಿ.ನಾರಾಯಣ ಅವರು ನೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 307 ಜೊತೆಗೆ 3(5) ಬಿಎನ್ಎಸ್ 2023ರಂತೆ ಪ್ರಕರಣ(ಅ. 5.127/2025) ದಾಖಲಾಗಿದೆ.

























