ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ-2ರಲ್ಲಿ ಇರುವ ಅವಿನಾಶ್ ಶೆಟ್ಟಿ ಅವರಿಗೆ ಸೇರಿದ ಅರ್ಕ ಕನ್ವೆನ್ಷನ್ ಹಾಲ್ನಲ್ಲಿ ಅಕ್ರಮವಾಗಿ ಜೂಜಾಟ ನಡೆಯುತ್ತಿದ್ದ ಕುರಿತು ಮಾಹಿತಿ ಲಭಿಸಿದ ಮೇರೆಗೆ, ಬೆಳ್ತಂಗಡಿ ಗ್ರಾಮಾಂತರ ವೃತ್ತನಿರೀಕ್ಷಕ ರವಿ ಬಿ.ಎಸ್. ಅವರು ಧರ್ಮಸ್ಥಳ ಠಾಣಾ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ.
ಡಿ.22.12.2025ರ ರಾತ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕನ್ವೆನ್ಷನ್ ಹಾಲ್‌ನ ಮೊದಲ ಮಹಡಿಯ ಪಾರ್ಟಿ ಹಾಲ್‌ನಲ್ಲಿ ಹಲವು ಮಂದಿ ಸೇರಿಕೊಂಡು ಹಣ ಗಳಿಸುವ ಉದ್ದೇಶದಿಂದ ಕಾನೂನು ಬಾಹಿರವಾಗಿ ‘ಅಂದರ್–ಬಾಹರ್’ ಇಸ್ಪಿಟ್ ಆಟ ಆಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಜೋರಾಗಿ ಗದ್ದಲ ಉಂಟಾಗಿ ಸುತ್ತಮುತ್ತಲಿನವರಿಗೆ ತೊಂದರೆಯಾಗುತ್ತಿತ್ತು ಎನ್ನಲಾಗಿದೆ.
ಪೊಲೀಸರು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ
ರಾಧಾಕೃಷ್ಣ (38), ವಚನ್ ಅಜಿಕುರಿ, ಅವಿನಾಶ್ ಶೆಟ್ಟಿ, ನಿಧೀಶ್ (30), ಅನ್ವರ್ (43), ಮಹಮ್ಮದ್ ಶಫಿಕ್ (38), ಇಬ್ರಾಹೀಂ (40), ಪರಮೇಶ್ (57), ಶರೀಫ್ (38), ಉಬೈದುಲ್ಲಾ (43), ಪರಮೇಶ್ವರಪ್ಪ (56), ಅಶೋಕ್ (48) ಹಾಗೂ ಗಾಡ್ವಿನ್ ಗೋವಿಯಸ್ (60) ಸೇರಿದಂತೆ ಇತರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮ ಜೂಜಾಟಕ್ಕೆ ಬಳಸಲಾಗುತ್ತಿದ್ದ ಇಸ್ಪಿಟ್ ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಅಪರಾಧ ಸಂಖ್ಯೆ 81/2025, ಕಲಂ 79, 80 ಕೆಪಿ ಆಕ್ಟ್ ಹಾಗೂ 112 BNS–2023ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

























