ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಸ್ಪೋರ್ಟ್ ಪೊಲೀಸ್ ವೆರಿಫಿಕೇಶನ್ ಸಂಬಂಧಿಸಿದಂತೆ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. SHAKTI DAS ಎಂಬ ವ್ಯಕ್ತಿ 2025ರ ಫೆಬ್ರವರಿ ತಿಂಗಳಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಪೊಲೀಸ್ ಪರಿಶೀಲನೆಯ ವೇಳೆ ಅರ್ಜಿದಾರರ ವಿಳಾಸ ದಾಖಲೆಗಳಿಗೆ ತಾಳೆಯಾಗದ ಕಾರಣ ಅರ್ಜಿಯನ್ನು ನಾ-ಶಿಫಾರಸ್ಸು ಮಾಡಲಾಗಿತ್ತು.
ನಂತರ 2025ರ ಜೂನ್ ತಿಂಗಳಲ್ಲಿ ಶಕ್ತಿ ದಾಸ್ ಮರುಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯನ್ನು ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಎಂಬವರು, ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಅವರ ಅರಿವಿಲ್ಲದೇ, ಅವರ ಹೆಸರಿನಲ್ಲಿ ಸುಳ್ಳು ವರದಿ ತಯಾರಿಸಿ ಸಹಿಯನ್ನು ಫೋರ್ಜರಿ ಮಾಡಿ ಮೇಲಾಧಿಕಾರಿಗಳಿಂದ ಶಿಫಾರಸ್ಸು ಪಡೆದು ಕಳುಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ ಈ ಅಕ್ರಮ ಬಹಿರಂಗವಾಗದಂತೆ ಪರಿಶೀಲನಾ ದಾಖಲೆಗಳನ್ನು ನಾಶಪಡಿಸಿರುವುದೂ ತಿಳಿದು ಬಂದಿದೆ.
ದಿನಾಂಕ 19-12-2025 ರಂದು ದಾಖಲೆಗಳ ಪರಿಶೀಲನೆಯ ವೇಳೆ ಈ ಕೃತ್ಯ ಬೆಳಕಿಗೆ ಬಂದಿದ್ದು, ಕೇಂದ್ರ ಸರ್ಕಾರದಿಂದ ನೀಡಲಾಗುವ ಅತೀ ಮಹತ್ವದ ಗುರುತಿನ ಚೀಟಿ ಆದ ಪಾಸ್ಪೋರ್ಟ್ ಅನ್ನು ಅಪರಾಧಿಕ ನಂಬಿಕೆ ದ್ರೋಹದ ಮೂಲಕ ಪಡೆದುಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.193/2025 ಕಲಂ 336, 337, 316(5), 238 BNS 2023ರ ಅಡಿಯಲ್ಲಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಹಾಗೂ ಸುಳ್ಳು ದಾಖಲೆ ನೀಡಿ ಪಾಸ್ಪೋರ್ಟ್ ಪಡೆದ ಶಕ್ತಿ ದಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿತ ಪ್ರದೀಪ್ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಶಕ್ತಿ ದಾಸ್ ಅವರ ಆಧಾರ್ ಕಾರ್ಡ್ನಲ್ಲಿ ಪಶ್ಚಿಮ ಬಂಗಾಳದ ವಿಳಾಸ ದಾಖಲಾಗಿದ್ದು, ಈಗಾಗಲೇ ಆತನ ಸಂಬಂಧಿಕರನ್ನು ಸಂಪರ್ಕಿಸಲಾಗಿದ್ದು, ಅವರು ಠಾಣೆಗೆ ಬರುವ ಸಲುವಾಗಿ ಪಶ್ಚಿಮ ಬಂಗಾಳದಿಂದ ಪ್ರಯಾಣದಲ್ಲಿದ್ದಾರೆ. ಪ್ರಸ್ತುತ ತನಿಖಾ ಹಂತದಲ್ಲಿ ಶಕ್ತಿ ದಾಸ್ ಬಾಂಗ್ಲಾದೇಶದ ನಾಗರಿಕನೆಂಬ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

























