ಪುತ್ತೂರು:ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅ.ಕ್ರ.53/2025, ಕಲಂ 306 ಬಿ ಎನ್ ಎಸ್ ಪ್ರಕರಣದಲ್ಲಿ ಆರೋಪಿತನಾಗಿದ್ದ ಸುಳ್ಯ ತಾಲೂಕು ಐವರ್ನಾಡು ನಿವಾಸಿ ಶಿವಪ್ರಸಾದ್ (41) ಎಂಬಾತನಿಗೆ ಪುತ್ತೂರಿನ ಮಾನ್ಯ ಎ.ಎಸ್.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯವು 3 ವರ್ಷಗಳ ಸಾದಾ ಸಜೆ ಹಾಗೂ ₹10,000 ದಂಡ ವಿಧಿಸಿ ಆದೇಶ ಹೊರಡಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕೆಂದು ನ್ಯಾಯಾಲಯ ತಿಳಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮ ಬಂಡಾರಿ ಅವರು ನಡೆಸಿದ್ದು, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತ್ವರಿತವಾಗಿ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯ ವೇಳೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಚೇತನಾದೇವಿ ಅವರು ಸಮರ್ಥವಾಗಿ ವಾದ ಮಂಡನೆ ನಡೆಸಿದರು.
ನ್ಯಾಯಾಧೀಶರಾದ ಶ್ರೀ ದೇವರಾಜ್ ಅವರು ಎಲ್ಲಾ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದರು.


























