ಕಡಬ: ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬನು ಸುಮಾರು ₹6.57 ಲಕ್ಷ ಮೌಲ್ಯದ ಮದ್ಯವನ್ನು ಮಾರಾಟ ಮಾಡಿ ಹಣವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಬಿಳಿನೆಲೆ ಗ್ರಾಮ, ಕಡಬದ ವಿಶಾಲ್ ಸ್ಟೀಫನ್ (25) ಎಂಬವರು ನೀಡಿದ ದೂರಿನ ಪ್ರಕಾರ, ಅವರ ತಾಯಿಗೆ ಸೇರಿದ ಕಡಬ ತಾಲ್ಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿರುವ ಬಾರ್‌ನಲ್ಲಿ ಹರ್ಷಿತ್ ಬಿ.ಕೆ. (ನಿವಾಸಿ: ಹುಂಚಪ್ಪಡಿ, ಕಡಬ) ಎಂಬಾತನು ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದನು. ದಿನನಿತ್ಯದ ಹಣಕಾಸು ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿ ಆತನಿಗೆ ನೀಡಲಾಗಿತ್ತು.
ದಿನಾಂಕ 21-12-2025ರ ರಾತ್ರಿ ಬಾರ್‌ನ ವಹಿವಾಟು ಪರಿಶೀಲಿಸಿದ ವೇಳೆ ಹಣಕಾಸಿನಲ್ಲಿ ವ್ಯತ್ಯಯ ಕಂಡುಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಮರುದಿನ 22-12-2025ರಂದು ಎಲ್ಲವೂ ಸರಿಯಾಗಲಿದೆ ಹಾಗೂ ನಗದನ್ನು ಬ್ಯಾಂಕಿಗೆ ಜಮೆ ಮಾಡುವುದಾಗಿ ಹರ್ಷಿತ್ ಭರವಸೆ ನೀಡಿದ್ದನು. ಆದರೆ ಮರುದಿನವೂ ಹಣ ಜಮೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಆತನನ್ನು ವಿಚಾರಿಸಲು ಆತ ವಾಸ್ತವ್ಯವಿದ್ದ ಕೊಠಡಿಗೆ ತೆರಳಿದಾಗ ಆತ ನಾಪತ್ತೆಯಾಗಿರುವುದು ಕಂಡುಬಂದಿತು. ಬಳಿಕ ಪರಿಶೀಲನೆ ನಡೆಸಿದಾಗ, ಸ್ಟಾಕ್ ರೂಮ್ನಲ್ಲಿದ್ದ ಸುಮಾರು ₹6,57,104 ಮೌಲ್ಯದ ಮದ್ಯವನ್ನು ಆರೋಪಿಯು ಈಗಾಗಲೇ ಮಾರಾಟ ಮಾಡಿ, ಅದರ ಹಣವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿರುವುದು ಹಾಗೂ ದಿನಾಂಕ 21-12-2025ರಂದು ವ್ಯಾಪಾರದ ನಗದನ್ನು ಕಳವು ಮಾಡಿ ಪರಾರಿಯಾಗಿರುವುದು ತಿಳಿದುಬಂದಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 94/2025 ಅಡಿಯಲ್ಲಿ BNS-2023ರ ಕಲಂ 303(2), 314 ಮತ್ತು 316(4)ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.























