ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಹಣ ಪಾವತಿಸಲು ನಿರಾಕರಿಸಿ ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ. (25) ನೀಡಿದ ದೂರಿನಂತೆ, ಅವರು ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಇನ್‌ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 29-12-2025ರ ಮುಂಜಾನೆ ಕೆಎ.18.ಸಿ.3048 ನೋಂದಣಿಯ ಟಾಟಾ ಲಾರಿಯೊಂದು ರಸ್ತೆ ವಿರುದ್ದ ದಿಕ್ಕಿನಿಂದ ಟೋಲ್ ಗೇಟ್‌ಗೆ ಬಂದಿತು. ಟೋಲ್ ಸಿಬ್ಬಂದಿಗಳು ಟೋಲ್ ಹಣ ಕೇಳಿದಾಗ ಲಾರಿ ಚಾಲಕ ಹಣ ನೀಡಲು ನಿರಾಕರಿಸಿ ಮುಂದಕ್ಕೆ ಚಲಾಯಿಸಿ ಟೋಲ್ ಗೇಟ್‌ಗೆ ಹಾನಿ ಉಂಟುಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಾದ ಬಳಿಕ ಲಾರಿ ಚಾಲಕ ಹಾಗೂ ಇನ್ನೋರ್ವ ಆರೋಪಿಯು ಟೋಲ್ ಸಿಬ್ಬಂದಿಗಳಾದ ಅಂಕಿತ್ ಮತ್ತು ರೋಹಿತ್ ಎಂಬವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮತ್ತೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರನ್ನು ಕರೆದುಕೊಂಡು ಬಂದು ಟೋಲ್ ಬೂತ್ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಪುನಃ ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ.154/2025ರಂತೆ BNS-2023ರ ಕಲಂ 329(3), 351(2), 352, 115(2), 118(1), 324(2), r/w 3(5) ಹಾಗೂ IMV ಕಾಯ್ದೆಯ ಕಲಂ 184(E) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್ (23) ಹಾಗೂ ಕ್ಲೀನರ್ ತೇಜಸ್ (26) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

























