ಪುತ್ತೂರು: ಪುತ್ತೂರು ಟೌನ್ ಬ್ಯಾಂಕ್ ಕಟ್ಟಡ ಸಣ್ಣ ಕೊಠಡಿಯಲ್ಲಿ ಪುತ್ತೂರು ತಾಲೂಕು ಮಹಿಳೆಯರ ಗ್ರಾಹಕ ಸಹಕಾರಿ ಸಂಘ ಎಂಬ ಹೆಸರಿನಿಂದ ಆರಂಭಗೊಂಡ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ಇದೀಗ ಸುವರ್ಣ ಸಂಭ್ರಮದಲ್ಲಿದ್ದು ಡಿ.31ರಂದು ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಲಿದೆ.
ಸುವರ್ಣ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ಸ್ವಾಸ್ಥ್ಯ ಸಮಾಜಕ್ಕೆ ಮಹಿಳೆಯರ ಸಹಕಾರ ಎಂಬ ವಿಚಾರದಲ್ಲಿ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಉಪನ್ಯಾಸ ನಡೆಯಲಿದೆ.
11.30ಕ್ಕೆಸಭಾ ಕಾರ್ಯಕ್ರಮ ನಡೆಯಲಿದ್ದುದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೂಟ್ಟು ಅವರು ಧ್ವಜಾರೋಹಣ ಮಾಡಲಿದ್ದಾರೆ.
ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಸುವರ್ಣ ಮಹೋತ್ಸವ ಉದ್ಘಾಟಿಸಲಿದ್ದಾರೆ. ಶಾಸಕ ಆಶೋಕ್ ಕುಮಾರ್ ರೈ ಅವರು ಸಹಕಾರ ಜ್ಯೋತಿ ಮಹಿಳಾ ಸ್ವಸಹಾಯ ಸಂಘಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಧನಾದೇಶ ವಿತರಣೆ ಮಾಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ತಾಲೂಕು ಕೃಷಿ ಉತ್ಪನ್ನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ್ ಕೊಳತ್ತಾಯ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಮ್ ರಘು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮುಂದೆ ಒಂದು ವರ್ಷ ಪೂರ್ತಿ ಪ್ರತಿ ತಿಂಗಳು ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಹೆಚ್ ಅವರು ತಿಳಿಸಿದ್ದಾರೆ.
























