ಪುತ್ತೂರು: ಕೆಯೂರು ಗ್ರಾಮದ ಮಾಡಾವು ಗೌರಿ ಹೊಳೆಗೆ ಯಾರೋ ಪ್ರಾಣಿಯ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ಕಟ್ಟಿ ಎಸೆದಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಕೆಯ್ಯರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗೌರಿ ಹೊಳೆಯ ನೀರನ್ನು ಸ್ಥಳೀಯರು ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯಲು ಕೂಡ ಉಪಯೋಗಿಸುತ್ತಿದ್ದಾರೆ. ಇದಲ್ಲದೆ ಧಾರ್ಮಿಕ ಕೇಂದ್ರದ ಬಳಿಯೇಈ ರೀತಿಯಾಗಿ ಪ್ರಾಣಿ ತ್ಯಾಜ್ಯ ಎಸೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದೂರಿನಲ್ಲಿ ಕೇಳಿಕೊಂಡಿದ್ದರು.
ಈ ಬಗ್ಗೆ ಡಿ.31 ರಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು, ಎಫ್‌ಎಸ್ಎಲ್ ತಂಡದವರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಡಾವು ಗೌರಿ ಹೊಳೆಯಲ್ಲಿ ಗೋಣಿ ಚೀಲದ ಕಟ್ಟುಗಳು ಇರುವ ಬಗ್ಗೆ ದ.29 ರಂದು ಸ್ಥಳೀಯರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷರು ಪರಿಶೀಲನೆ ಮಾಡುವ ವೇಳೆ ಗೋಣಿ ಚೀಲದಲ್ಲಿ ಪ್ರಾಣಿಯ ವಿವಿಧ ಭಾಗಗಳು ಇರುವಂತೆ ಕಂಡು ಬಂದಿದ್ದು ಆದರೆ ಯಾವ ಪ್ರಾಣಿಯ ಭಾಗಗಳು ಎಂದು ಸ್ಪಷ್ಟವಾಗಿ ಗೊತ್ತಾಗಲಿಲ್ಲ ತಕ್ಷಣವೇ ಅಧ್ಯಕ್ಷರು ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಗೆ ದೂರೊಂದನ್ನು ನೀಡಿ ಹೊಳೆಯಲ್ಲಿ ಪ್ರಾಣಿ ತ್ಯಾಜ್ಯ ಇರುವ ಬಗ್ಗೆ ಪರಿಶೀಲನೆ ಮಾಡುವಂತೆ ಕೇಳಿಕೊಂಡಿದ್ದರು.
ಪೊಲೀಸ್, ಪಶು ವೈದ್ಯಾಧಿಕಾರಿಗಳ ಭೇಟಿ: ಡಿ.31 ರಂದು ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕಿ ಸುಷ್ಮಾ ಜಿ.ಭಂಡಾರಿ, ಎಎಸ್‌ಐ ಮುರುಗೇಶ್, ಸಿಬ್ಬಂದಿಗಳಾದ ಭವಿತ್ ರೈ,ನಾಗೇಶ್, ರಾಧಾಕೃಷ್ಣ, ಹಕೀಂ, ಪಶು ವೈದ್ಯಾಧಿಕಾರಿ ಪ್ರಕಾಶ್, ಎಫ್‌ಎಸ್ಎಲ್ ಸಿಬ್ಬಂದಿ ಸುಮನ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋಣಿಯಲ್ಲಿದ್ದ ಪ್ರಾಣಿ ತ್ಯಾಜ್ಯವನ್ನು ಪರಿಶೀಲನೆ ಮಾಡಿದ ಪಶು ವೈದ್ಯಾಧಿಕಾರಿ ಪ್ರಕಾಶ್ ರವರು ಇದು ಆಡಿನ ತ್ಯಾಜ್ಯಗಳೆಂದು ತಿಳಿಸಿದ್ದಾರೆ. ಸುಮಾರು 6 ಆಡಿನ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಎಸೆದಿದ್ದು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























