ಮಂಗಳೂರು: ನಗರದ ಹೊರ ವಲಯ ಮರಕಡದಲ್ಲಿ ಕಾರಿನ ಟೈರ್ ಸ್ಫೋಟಗೊಂಡು ಸಂಭವಿಸಿದ ಅಪಘಾತವೊಂದರಲ್ಲಿ ಕಾರು ಚಲಾಯಿಸುತ್ತಿದ್ದ ಬೊಂದೇಲ್ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ಧರ್ಮಗುರು ಫಾ| ಆ್ಯಂಡೋ ಲಿಯೋ ಡಿ’ಸೋಜಾ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಜ.1ರಂದು ಸಂಜೆ ವೇಳೆ ಘಟನೆ ನಡೆದಿದೆ. ಫಾ| ಆ್ಯಂಡೋ ಅವರು ನೀರುಡೆಯ ನಿವಾಸದಲ್ಲಿ ಹೊಸ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಜಪೆ ಮೂಲಕ ಬೊಂದೇಲ್ ನತ್ತ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕಾರು ಮರಕಡದಲ್ಲಿ ಸಾಗುತ್ತಿದ್ದಾಗ ಏಕಾಏಕಿ ಕಾರಿನ ಟೈರ್ ಸ್ಫೋಟಗೊಂಡಿದೆ. ಇದರಿಂದಾಗಿ ಅವರ ನಿಯಂತ್ರಣ ಕಳೆದು ಕೊಂಡ ಕಾರು ರಸ್ತೆ ಬದಿಗೆ ವೇಗವಾಗಿ ಸಾಗಿ, ಕೆಳಭಾಗದಲ್ಲಿದ್ದ ಮನೆಯೊಂದರ ಅಂಗಳದಲ್ಲಿ ಮಗುಚಿ ಬಿದ್ದಿದೆ.
ಕೂಡಲೇ ಸ್ಥಳೀಯರು ಅಲ್ಲಿಗೆ ಧಾವಿಸಿ ಕಾರನ್ನು ಸಹಜ ಸ್ಥಿತಿಗೆ ತಂದು ಕಾರಿನಲ್ಲಿದ್ದ ಧರ್ಮಗುರುವನ್ನು ರಕ್ಷಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಕಾರು ಜಖಂಗೊಂಡಿದೆ.

























