ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಠಾಣಾ ಅ.ಕ್ರ. 04/2026ರಂತೆ BNS–2023ರ ಕಲಂ 00 MP (ಹೆಂಗಸು ಮತ್ತು ಮಗು ಕಾಣೆ) ಅಡಿಯಲ್ಲಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರರಾದ ಹಾಜಿರಾಬಿ (39), ಗಂಡ ಇಸ್ಮಾಯಿಲ್, ನಿವಾಸಿ ನೀರಾಜೆ ಮನೆ, ರಾಮಕುಂಜ ಗ್ರಾಮ, ಕಡಬ ತಾಲೂಕು ಇವರು ದಿನಾಂಕ 07-01-2026ರಂದು ಸಂಜೆ 7.45 ಗಂಟೆಗೆ ಠಾಣೆಗೆ ದೂರು ನೀಡಿದ್ದಾರೆ. ದೂರು ಪ್ರಕಾರ, ಅವರ ತಮ್ಮನ ಪತ್ನಿ ನೇಹಾ (26) ಹಾಗೂ ಆಕೆಯ ಮಗ ಮಹಮ್ಮದ್ ನಿಹಾಲ್ (ಸುಮಾರು 3.5 ವರ್ಷ) ನಾಪತ್ತೆಯಾಗಿದ್ದಾರೆ.
ನೇಹಾ ಅವರು ಮುಡಿಗೆರೆಯಿಂದ ಸುಮಾರು 8 ವರ್ಷಗಳ ಹಿಂದೆ ಮುನೀರ್ ಎಂಬವರನ್ನು ವಿವಾಹವಾಗಿದ್ದು, ದಂಪತಿಗೆ ಸಫಿಯಾ (6) ಮತ್ತು ಮಹಮ್ಮದ್ ನಿಹಾಲ್ ಎಂಬ ಇಬ್ಬರು ಮಕ್ಕಳು ಇದ್ದರು. ಇತ್ತೀಚೆಗೆ ಸುಮಾರು ಮೂರು ತಿಂಗಳ ಹಿಂದೆ ಮುನೀರ್, ಪತ್ನಿ ನೇಹಾ ಹಾಗೂ ಕಿರಿಯ ಮಗನೊಂದಿಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಹಿರಿಯ ಮಗಳನ್ನು ರಾಮಕುಂಜದಲ್ಲಿರುವ ತಂದೆ ಮನೆಯಲ್ಲೇ ಬಿಟ್ಟು ಹೋಗಿದ್ದರು.
ದಿನಾಂಕ 07-11-2025ರಂದು ಮಗಳ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬ ಗ್ರಾಮಕ್ಕೆ ಬಂದು, ಅದೇ ದಿನ ಮರಳಿ ಬೆಂಗಳೂರಿಗೆ ತೆರಳಿದ್ದರು. ನಂತರ ದಿನಾಂಕ 25-12-2025ರಂದು ಮುನೀರ್ ಒಬ್ಬರೇ ಗ್ರಾಮಕ್ಕೆ ಬಂದಿದ್ದು, ಪತ್ನಿ ಮತ್ತು ಮಗ ಇನ್ನೆರಡು ದಿನಗಳಲ್ಲಿ ಬರುತ್ತಾರೆ ಎಂದು ತಿಳಿಸಿದ್ದಾರೆ. ಈ ಅವಧಿಯಲ್ಲಿ ವಿಡಿಯೋ ಕಾಲ್ ಮೂಲಕ ಪತ್ನಿ ಮತ್ತು ಮಗನೊಂದಿಗೆ ಮಾತನಾಡಿರುವುದನ್ನು ಕುಟುಂಬಸ್ಥರು ನೋಡಿದ್ದರು ಎನ್ನಲಾಗಿದೆ.
ಆದರೆ ಬಳಿಕ ಮುನೀರ್ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಜನರ ಸಹಾಯದಿಂದ ರಕ್ಷಿಸಲ್ಪಟ್ಟಿದ್ದಾರೆ. ಪ್ರಸ್ತುತ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿದುಬಂದಿದೆ.
ಈ ನಡುವೆ ನೇಹಾ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದು, ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಕೊನೆಯದಾಗಿ ದಿನಾಂಕ 28-12-2025ರಂದು ಮುನೀರ್ ಅವರು ಪಿರ್ಯಾದುದಾರರ ತಂದೆಯ ಮೊಬೈಲ್‌ನಿಂದ ನೇಹಾಳ ಮೊಬೈಲ್‌ಗೆ ಕರೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ನೇಹಾ ಮತ್ತು ಆಕೆಯ ಮಗ ಮಹಮ್ಮದ್ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ನಾಪತ್ತೆಯಾದ ತಾಯಿ–ಮಗುವಿನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


























