ಮಂಗಳೂರು: ರಸ್ತೆ ಬದಿಯ ಹೊಟೇಲ್ನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಪೊಲೀಸರು ಸ್ವಯಂಪ್ರೇರಿತ (ಸುವೋ ಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ ಹೀಗಿದೆ: ರಸ್ತೆ ಬದಿಯಲ್ಲಿ ಇರುವ ಒಂದು ಸಣ್ಣ ಹೊಟೇಲ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಾಲೀಕರು ಹಿಂದೂ ಮಾಲಧಾರಿಗಳು ಸೇರಿದಂತೆ ಇತರರಿಗೆ ಆಹಾರ ವಿತರಿಸುತ್ತಿದ್ದರು. ಇದು ಸಮಾಜದಲ್ಲಿ ಸೌಹಾರ್ದತೆಯ ಒಳ್ಳೆಯ ಸಂಕೇತವಾಗಿತ್ತು. ಇದೇ ವೇಳೆ ಒಂದು ಹಸು ಹೊಟೇಲ್ಗೆ ಬಂದು ಅಲ್ಲಿ ಇಟ್ಟಿದ್ದ ಆಹಾರ ಪದಾರ್ಥಗಳನ್ನು ತಿನ್ನಲು ಯತ್ನಿಸಿದೆ.
ಅದನ್ನು ದೂರ ಮಾಡಲು ಹೊಟೇಲ್ ಮಾಲೀಕರು ಈರುಳ್ಳಿ ಕತ್ತರಿಸಲು ಬಳಸುತ್ತಿದ್ದ ಸಣ್ಣ ಚಾಕುವನ್ನು ಹಿಡಿದು ಬೆದರಿಸಿದ್ದಾಗಿ ಹೇಳಲಾಗಿದೆ.
ಈ ಸಂದರ್ಭ ಹಸುವಿಗೆ ಸುಮಾರು 1–2 ಇಂಚುಗಳಷ್ಟು ಸಣ್ಣ ಗಾಯವಾಗಿದೆ. ಈ ಘಟನೆ ಉದ್ದೇಶಪೂರ್ವಕವಾಗಿಯಲ್ಲ ಎಂದು ಈ ಸಂಬಂಧ ಯಾರಿಂದಲೂ ಯಾವುದೇ ದೂರು ದಾಖಲಾಗಿಲ್ಲ.
ಆದರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಹಸುವಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಹೊಟೇಲ್ ಮಾಲೀಕರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (Prevention of Cruelty to Animals Act)ಯ ಸೆಕ್ಷನ್ 11(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ, ಹಸುವನ್ನು ರಸ್ತೆ ಮೇಲೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಬಿಡಲಾಗಿತ್ತು ಎಂಬ ಆರೋಪದ ಮೇಲೆ ಹಸುವಿನ ಮಾಲೀಕರ ವಿರುದ್ಧ ಸೆಕ್ಷನ್ 11(h) ಮತ್ತು 11(i) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಸುವಿಗೆ ಸರಿಯಾದ ಆಹಾರ ನೀಡದೆ ನಿರ್ಲಕ್ಷ್ಯ ವಹಿಸಿ ರಸ್ತೆಯಲ್ಲಿ ಬಿಟ್ಟಿರುವುದೇ ಈ ಕ್ರಮಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


























