ಬೆಂಗಳೂರು: ಸಿಲಿಕಾನ್ ಸಿಟಿಯ ರಾಮಮೂರ್ತಿ ನಗರದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆಕೆಯನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬಲಿಯಾಗಿದೆ.
ಶರ್ಮಿಳಾ (34) ಮೃತ ದುರ್ದೈವಿ. ಮೂಲತಃ ಮಂಗಳೂರಿನವರು. ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್ ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು ಎಂದು ತಿಳಿದುಬಂದಿದೆ.
ಜನವರಿ 3ರ ರಾತ್ರಿ ಘಟನೆ ನಡೆದಿದ್ದು, ಜ.5ರಂದು ಬೆಳಕಿಗೆ ಬಂದಿದೆ. ಘಟನೆ ನಡೆದ ದಿನ ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ವಾಸಿಸುತ್ತಿದ್ದ ಫ್ಲ್ಯಾಟ್ನ ರೂಮ್ವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿತ್ತು. ಇದನ್ನ ನೋಡಿದ ಮನೆ ಮಾಲೀಕ ವಿಜಯೇಂದ್ರ ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಬೆಂಕಿ ಹೊತ್ತಿಕೊಂಡಿದ್ದ ಪರಿಣಾಮ ರೂಮಿನಿಂದ ಹೊರಬರಲಾಗದೇ ಉಸಿರುಗಟ್ಟಿ ಟೆಕ್ಕಿ ಶರ್ಮಿಳಾ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿತ್ತು.
ಈ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಯಾರಾದರೂ ಮನೆಗೆ ಬಂದು ಹೋಗಿರಬಹುದಾ ಎಂದು ಅನುಮಾನ ವ್ಯಕ್ತವಾಗಿತ್ತು. ಪೊಲೀಸರ ತನಿಖೆ ವೇಳೆ ಅನುಮಾನಾಸ್ಪದವಾಗಿ ಕಂಡ ಯುವಕ ಕರ್ನಲ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಈ ವೇಳೆ ಇದು ಆಕಸ್ಮಿಕವಲ್ಲ. ಕೊಲೆ ಅನ್ನೋದು ಗೊತ್ತಾಗಿದೆ.
ಶರ್ಮಿಳಾನ್ನು ಕೊಲೆ ಮಾಡಿದ್ದು ಕೇರಳ ಮೂಲದ ಹದಿನೆಂಟು ವರ್ಷದ ಕರ್ನಲ್ ಕುರಯ್. ಶರ್ಮಿಳಾ ಹಾಗೂ ಆರೋಪಿ ಅಕ್ಕಪಕ್ಕದ ನಿವಾಸಿಗಳು. ಸಾಮಾನ್ಯವಾಗಿ ಶರ್ಮಿಳಾ ಆರೋಪಿ ಕರ್ನಲ್ ಎದುರು ಬಂದಾಗ ಸ್ಮೈಲ್ ಕೊಟ್ಟು ಮಾತನಾಡಿಸುತ್ತಿದ್ದಳು. ಇದನ್ನೇ ಪ್ರೀತಿ ಎದುಕೊಂಡಿದ್ದ ಆರೋಪಿ ಆಕೆಯನ್ನು ಪ್ರೀತಿಸಲು ಆರಂಭಿಸಿದ್ದ. ಘಟನೆ ನಡೆದ ದಿನ ರಾತ್ರಿ ಶರ್ಮಿಳಾ ಮನೆಗೆ ಏಕಾಏಕಿ ಹಿಂದಿನಿಂದ ತಬ್ಬಿಕೊಂಡಿದ್ದ. ಗಾಬರಿಯಾದ ಶರ್ಮಿಳಾ ಆತನನ್ನು ತಳ್ಳಿ, ಬೈದಿದ್ದಳು. ಇದರಿಂದ ಕೋಪಗೊಂಡ ಆರೋಪಿ ಹಲ್ಲೆ ಮಾಡಿ, ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಗಾಬರಿಯಲ್ಲಿ ಅದೇ ತಲೆದಿಂಬಿಗೆ ಬೆಂಕಿ ಹಚ್ಚಿ, ಅಲ್ಲಿಂದ ಎಸ್ಕೇಪ್ ಆಗಿದ್ದ ಎಂದು ತಿಳಿದುಬಂದಿದೆ.
ಪರಾರಿಯಾಗುವ ವೇಳೆ ಶರ್ಮಿಳಾಳ ಮೊಬೈಲ್ ಫೋನ್ನ್ನು ಕೂಡ ತೆಗೆದುಕೊಂಡು ಹೋಗಿದ್ದಾನೆ. ಅದೇ ಮೊಬೈಲ್ ಆಧಾರವಾಗಿಯೇ ಆರೋಪಿ ಕರ್ನಲ್ ಕುರೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಆರಂಭದಲ್ಲಿ ಈ ಘಟನೆ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಬೆಂಕಿ ಅವಘಡ ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಇದು ಪೂರ್ವಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿತ್ತು. ಟೆಕ್ಕಿ ಶರ್ಮಿಳಾಳನ್ನು ವನ್ ಸೈಡೆಡ್ ಲವ್ ಮಾಡಿದ್ದ ಆರೋಪಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬೆಂಕಿ ಹಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಎಫ್ಎಸ್ಎಲ್ ವರದಿ ಬಂದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


























