ಕಳಿಯ: ನಾಳ ದೇವಸ್ಥಾನಕ್ಕೆ ಇಂದು ಮುಂಜಾನೆ 4ಗಂಟೆಗೆ ಧನುಪೂಜೆಗೆ ಮನೆಯಿಂದ ಹೋಗಿದ್ದ ಬಾಲಕನೋರ್ವ ನಿಗೂಢವಾಗಿ ನಾಪತ್ತೆಯಾಗಿದ್ದು ಮನೆಯವರಲ್ಲಿ ಆತಂಕ ಸೃಷ್ಟಿಸಿದೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯವರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ನಾಪತ್ತೆಯಾದ ಬಾಲಕನಾಗಿದ್ದಾನೆ.
ನಾಳ ದೇವಸ್ಥಾನಕ್ಕೆ ಸುಮಂತ್ ಸೇರಿದಂತೆ ಮೂರು ಮಂದಿ ಬಾಲಕರು ಒಟ್ಟಿಗೆ ಹೋಗುತ್ತಿದ್ದು, ಇಂದು ಮುಂಜಾನೆ ಸುಮಂತ್ ಮನೆಯಿಂದ ಬರುವಾಗ ತಡವಾದ್ದರಿಂದ ಇಬ್ಬರು ಬಾಲಕರು ಆತನಿಗಾಗಿ ಕಾದು ದೇವಸ್ಥಾನಕ್ಕೆ ತೆರಳಿದ್ದರು.
ಆದರೆ ಸುಮಂತ್ ಮನೆಯಿಂದ ಹೊರಟ್ಟಿದ್ದರು ದೇವಸ್ಥಾನಕ್ಕೆ ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಬಾಲಕರು ಆತನ ಮನೆಗೆ ಪೋನ್ ಮಾಡಿದಾಗ ಸುಮಂತ್‌ನ ಮನೆಯವರು ಆತ ದೇವಸ್ಥಾನಕ್ಕೆ ಮುಂಜಾನೆಯೇ ಹೋಗಿದ್ದಾನೆ ಎಂದು ತಿಳಿಸಿದ್ದರು.
ಆದರೆ ಆತ ದೇವಸ್ಥಾನಕ್ಕೆ ಬಂದಿಲ್ಲ ಎಂದು ಬಾಲಕರು ಹೇಳಿದಾಗ ಮನೆಯವರು ಆತಂಕಗೊಂಡು ಸ್ಥಳೀಯವಾಗಿ ಮಾಹಿತಿ ನೀಡಿದರು. ಬಾಲಕ ಬರುವ ದಾರಿಯ ನಡುವೆ ಕೆರೆ ಬಳಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ ಸ್ಥಳೀಯರು ಸೇರಿದ್ದು ಹುಡುಕಾಟ ನಡೆಸುತ್ತಿದ್ದಾರೆ.
ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಚ್ಚಿನ ಪರಿಸರದಲ್ಲಿ ಚಿರತೆ ಓಡಾಟ ಇರುವುದರಿಂದ ಬಾಲಕ ನಿಗೂಢವಾಗಿ ನಾಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಹಾಗೂ ಮನೆಯವರಲ್ಲಿ ಆತಂಕ ಸೃಷ್ಟಿಯಾಗಿದೆ.


























