ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಗೆ 9 ಆರೋಗ್ಯ ಮತ್ತು ಕ್ಷೇಮ ಕಟ್ಟಡ ಮಂಜೂರಾಗಿದ್ದು ಈ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸೇವೆ ಮಾಡುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಯನ್ನು ಸರಕಾರ ನೇಮಿಸಿದ್ದರೂ ಅವರಿಗೆ ಸೂಕ್ತ ಕಟ್ಟಡದ ವ್ಯವಸ್ಥೆಯನ್ನು ಮಾಡಿರಲಿಲ್ಲ. ಇದೀಗ ಪುತ್ತೂರಿಗೆ 9 ಕಟ್ಟಡ ಮಂಜೂರಾಗಿದೆ.
ಪುತ್ತೂರು ತಾಲೂಕಿನ ನರಿಮೊಗರು, ಬೆಟ್ಟಂಪಾಡಿ, ಬನ್ನೂರು, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ಕೆಯ್ಯೂರು, ಪಡ್ನೂರು, ಕುರಿಯ ಮತ್ತು ನೆಕ್ಕಿಲಾಡಿಯಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ. ಕಟ್ಟಡಕ್ಕೆ ತಲಾ ೬೫ ಲಕ್ಷ ಅನುದಾನವನ್ನೂ ಮಂಜೂರು ಮಾಡಲಾಗಿದೆ.
ಈ ಕಟ್ಟಡದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯೋರ್ವರು ಗ್ರಾಮಸ್ಥರಿಗೆ ಸೇವೆಯನ್ನು ಒದಗಿಸಲಿದ್ದಾರೆ. ಈ ಕೇಂದ್ರದಲ್ಲಿ ಚಿಕಿತ್ಸೆಯ ಜೊತೆಗೆ ಸರಕಾರದ ವಿವಿಧ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವೂ ಈ ಕೇಂದ್ರದ ಮೂಲಕ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಕಟ್ಟಡ ನಿರ್ಮಾಣವಾಗುವುರೊಂದಿಗೆ ಹಲವು ವರ್ಷಗಳ ಬೇಡಿಕೆಯೊಂದು ಈಡೆರಿದಂತಾಗಿದೆ.
























