ಪುತ್ತೂರು: ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಇದರ ವತಿಯಿಂದ ಸಮಾಜ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ಸಂಘಟನೆಗಳಿಗೆ ಕೊಡಮಾಡಲು ರಾಜ್ಯ ಮಟ್ಟದ ಸಾಂಘಿಕ ಪ್ರಶಸ್ತಿ-2025-26 ಅನ್ನು ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗಕ್ಕೆ ಪ್ರಧಾನ ಮಾಡಲಾಯಿತು.
ಜ.18 ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ರಾಜ್ಯ ಮಟ್ಟದ ಯುವ ಸಂಭ್ರಮ 2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ರಾಜ್ಯದಲ್ಲಿ ಎರಡು ಸಂಘಟನೆಗಳಿಗೆ ಸಾಂಘಿಕ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಶ್ರೀ ದುರ್ಗಾ ಮಹಿಳಾ ಮಂಡಲ ಕೊಳಗದ್ದೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗಕ್ಕೆ ಪ್ರಶಸ್ತಿ ನೀಡಲಾಗಿದೆ. ಸಭಾಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಯುವಕರು ಚಿಂತೆ ಮಾಡುವುದನ್ನು ಬಿಟ್ಟು ಚಿಂತನಾಶೀಲರಾಗಿ ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ಮಾಡಬೇಕು. ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ತಮ್ಮೂರಿನ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮೆರವಣಿಗೆಗೆ ಚಾಲನೆ ನೀಡಿದ ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್, ಬೆಳ್ತಂಗಡಿಯ ಕಿರಣ್ ಚಂದ್ರ ಡಿ ಪುಷ್ಪಗಿರಿ ಉರುವಾಲು, ಮಂಗಳೂರು ಡಿ.ಕೆ. ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಜೋಯಲ್ ನೊರೊನ್ಹಾ, ರಾಜ್ಯ ಯುವಜನ ಒಕ್ಕೂಟದ ಅಧ್ಯಕ್ಷ ಡಾ.ಬಾಲಾಜಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ನಂಬಿಕೋಡಿ, ಪುತ್ತೂರು ಮುಕ್ರಂಪಾಡಿ ಎಸ್.ಆರ್.ಕೆ. ಲ್ಯಾಡರ್ಸ್‌ನ ವ್ಯವಸ್ಥಾಪಕರಾದ ಕೇಶವ ಗೌಡ ಅಮ್ಮೆ, ಯುವಜನ ಸೇವಾ ಕ್ರೀಡಾ ಇಲಾಖೆಯ ಸುಳ್ಯ ತಾಲೂಕು ಕ್ರೀಡಾಧಿಕಾರಿ ದೇವರಾಜ್ ಮುತ್ತಾಜೆ, ಕೃಷಿಕರಾದ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ, ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಬೆಳ್ಳಾರೆ ಕಾಮಧೇನು ಗ್ರೂಪ್‌ನ ಯಂ. ಮಾಧವ ಗೌಡ, ಎ.ಪಿ.ಎಂ.ಸಿ. ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ಹಿರಿಯ ವೈದ್ಯರಾದ ಡಾ. ರಾಮಯ್ಯ ಭಟ್, ಜೇಸಿಐ ಪಂಜ ವಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಕುಳಿ, ಯುವ ಸಂಭ್ರಮ ಸಂಘಟನಾ ಸಮಿತಿ ಸಂಚಾಲಕ ಮಾಧವ ಗೌಡ ಕಾಮದೇನು, ಅಧ್ಯಕ್ಷ ದಿಲೀಪ್ ಬಾಬುಬಿಟ್ಟು, ಪ್ರಧಾನ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಯುವಜನ ಸಂಯುಕ್ತ ಮಂಡಳ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಗೌರವಾಧ್ಯಕ್ಷ ವಿಜಯಕುಮಾರ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.
ಸಂಘಟನೆಯ ಸಮಾಜ ಸೇವೆಗೆ ಯುವಜನ ಒಕ್ಕೂಟದಿಂದ ರಾಜ್ಯ ಸಾಂಘಿಕ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ. ಈ ಪ್ರಶಸ್ತಿಯನ್ನು ಸಂಘಟನೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕಾರ, ಪ್ರೋತ್ಸಾಹ ನೀಡುತ್ತಿರುವ ಗಣ್ಯರಿಗೆ ಅರ್ಪಿಸುತ್ತಿದ್ದೇವೆ. ಇದು ಸಂಘಟನೆಯ ಸರ್ವ ಪದಾಧಿಕಾರಿಗಳ, ಸದಸ್ಯರ ಶ್ರಮದ ಫಲವಾಗಿದೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.’ ರಾಜೇಶ್ ಕೆ.ಮಯೂರ, ಸಂಘಟಕರು ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ
























