ಪುತ್ತೂರು: ಸಾಮಾನು ಖರೀದಿ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ಯುವಕರು ಜಗಳ ತೆಗೆದು ದಾಂಧಲೆ ನಡೆಸಿ, ಅಂಗಡಿಯೊಳಗಿದ್ದ ವಸ್ತುಗಳನ್ನು ಹಾಳುಗೆಡವಿ ನಷ್ಟ ಉಂಟು ಮಾಡಿ ಅಂಗಡಿ ಮಾಲಕಿಗೆ ಅವಾಚ್ಯವಾಗಿ ಬೈದಿರುವ ಘಟನೆ ಪಾಣಾಜೆಯಿಂದ ವರದಿಯಾಗಿದೆ.
ಪಾಣಾಜೆ ಗ್ರಾಮದ ದೈತೋಟದಲ್ಲಿ ಅಂಗಡಿ ಹೊಂದಿರುವ ವಿಮಲ (45ವ.)ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
‘ಜ.18ರಂದು ರಾತ್ರಿ 8.30 ಗಂಟೆಗೆ ಆರ್ಲಪದವು ಸೈಡ್‌ನಿಂದ ಅಂಗಡಿಗೆ ಬಂದ ಪುನೀತ್ ಮತ್ತು ಅಜಯ್ ಎಂಬವರು ಸಾಮಾನು ಖರೀದಿಸುವ ನೆಪದಲ್ಲಿ ಜಗಳ ತೆಗೆದು ದಾಂಧಲೆ ನಡೆಸಿ ಅಂಗಡಿಯೊಳಗಿದ್ದ ಚಾಕಲೇಟ್, ಬಿಸ್ಕೆಟ್, ಇನ್ನಿತರ ವಸ್ತುಗಳನ್ನು ಹೊರಗೆ ಬಿಸಾಡಿ ಹಾಳುಗೆಡವಿ ಸುಮಾರು 5,000 ರೂ. ನಷ್ಟವುಂಟು ಮಾಡಿದ್ದಲ್ಲದೇ, ನೀನು ಪಂಚಾಯತ್ ಸದಸ್ಯೆ ಅಲ್ಲವಾ? ನಿನ್ನನ್ನು, ನಿನ್ನ ಅಂಗಡಿಯನ್ನು ಹುಡಿ ಮಾಡುತ್ತೇನೆ, ನಿನ್ನ ಮನೆಗೆ ನುಗ್ಗಿ ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ವಿಮಲ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸರು BNS (4),351 (2) 3(5),352 22-2023 ಪ್ರಕರಣ (0008/2026)ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























