ದಕ್ಷಿಣ ಕನ್ನಡ ಜಿಲ್ಲೆಯ ಯೋಜನಾ ಸಮಿತಿಯ 13 ಸ್ಥಾನಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನಗಳಲ್ಲೂ ಜಯ ಸಾಧಿಸುವ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.
ಜಯಗಳಿಸಿದ 13 ಜನ ಅಭ್ಯರ್ಥಿಗಳ ಪೈಕಿ ವಿಟ್ಲ ಪಟ್ಟಣ ಪಂಚಾಯತ್‌ನಿಂದ ಇಬ್ಬರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ವಿಟ್ಲ ಭಾಗದಲ್ಲಿ ವಿಶೇಷ ಹರ್ಷವನ್ನುಂಟು ಮಾಡಿದೆ.
ವಿಟ್ಲ ಪಟ್ಟಣ ಪಂಚಾಯತ್‌ನ 12ನೇ ವಾರ್ಡಿನ ಸದಸ್ಯರಾದ ಹರೀಶ್ ಸಿ.ಎಚ್ ಅವರು ಈ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಇವರು ಪ್ರಸ್ತುತ ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಶಕ್ತಿಕೇಂದ್ರದ ಪ್ರಮುಖರಾಗಿ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಬಿಲ್ಲವ ಸಂಘದ ಅಧ್ಯಕ್ಷರಾಗಿ, ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಪ್ರಸ್ತುತ ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೊಬ್ಬ ಜಯಶೀಲ ಅಭ್ಯರ್ಥಿಯಾದ ರಕ್ಷಿತಾ ಸನತ್ ಅವರು ವಿಟ್ಲ ಪಟ್ಟಣ ಪಂಚಾಯತ್‌ನ 4ನೇ ವಾರ್ಡಿನ ಸದಸ್ಯರಾಗಿದ್ದಾರೆ. ಇವರು ಪ್ರಸ್ತುತ ಬಿಜೆಪಿ ವಿಟ್ಲ ಮಹಾಶಕ್ತಿ ಕೇಂದ್ರದ ‘ಮನ್ ಕೀ ಬಾತ್’ ಪ್ರಮುಖರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಮಹಿಳಾ ಸಂಘಟನೆಗಳು ಹಾಗೂ ಚಂದಳಿಕೆ ಶಾಲಾಭಿವೃದ್ಧಿ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಈ ಭರ್ಜರಿ ಗೆಲುವಿಗೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಈ ಆಯ್ಕೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.


























