ಮಂಗಳೂರು: ಆನ್‌ಲೈನ್ ಮ್ಯಾಟ್ರಿಮೋನಿ ಪ್ಲಾಟ್‌ಫಾರಂ ಮೂಲಕ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚನೆ ನಡೆಸುತ್ತಿದ್ದ ಸುಶಾಂತ್ ಪೂಜಾರಿ ಎಂಬ ಆರೋಪಿತನನ್ನು ಮಂಗಳೂರು ನಗರ ಪೊಲೀಸ್‌ರು ಬಂಧಿಸಿದ್ದಾರೆ.
ಪೀಡಿತ ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಪರಿಚಯವಾಗಿ, 02-02-2025ರಂದು ಮಹಾರಾಷ್ಟ್ರದ ಘನಸೋಳಿ, ನವ ಮುಂಬೈನಲ್ಲಿ ಮದುವೆಯಾಗಿದ್ದು, ನಂತರ ಹಂತ ಹಂತವಾಗಿ ಒಟ್ಟು ₹6,60,000 ಹಣವನ್ನು ಪಡೆದುಕೊಂಡಿದ್ದಾನೆ. ಮದುವೆಯ ಬಳಿಕ 15-11-2025ರಂದು ಯಾವುದೇ ಮಾಹಿತಿ ನೀಡದೇ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಅನುಮಾನಗೊಂಡ ಮಹಿಳೆ ವಿಚಾರಿಸಿದಾಗ, ಇದೇ ರೀತಿ ಹಲವಾರು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವುದು ಹಾಗೂ ಆರೋಪಿತನಿಗೆ ಈ ಮೊದಲು ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.184/2025 ಕಲಂ 318(4), 316(2), 316(1), 336(3), 340(1) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ದಿನಾಂಕ 05-02-2026ರಂದು ಆರೋಪಿತ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ಪತ್ತೆಹಚ್ಚಿ ಬಂಧಿಸಿದರು. ವಿಚಾರಣೆಯಲ್ಲಿ ಆತನು 2021ರಲ್ಲಿ ಉಡುಪಿಯ ಯುವತಿಯನ್ನು ಮದುವೆಯಾಗಿರುವುದು, ಉಡುಪಿ, ಮುಂಬೈ, ಬೆಂಗಳೂರು ಹಾಗೂ ಕಾರ್ಕಳ ಪ್ರದೇಶಗಳಲ್ಲಿನ ಒಟ್ಟು ಹಲವಾರು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದಲ್ಲದೆ, ಮುಲ್ಕಿ ನಿವಾಸಿ ಭಾಸ್ಕರ್ ಎಂಬ ಮತ್ತೊಬ್ಬ ಆರೋಪಿತನು ಸುಶಾಂತ್ ಪೂಜಾರಿಯ ಅಳಿಯ ಎಂದು ಹೇಳಿಕೊಂಡು ಪೀಡಿತ ಮಹಿಳೆ ಹಾಗೂ ಕುಟುಂಬಸ್ಥರಿಗೆ ನಂಬಿಕೆ ಮೂಡಿಸಿ, ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮದುವೆ ನಡೆಸಲು ಸಹಕರಿಸಿದ್ದಾನೆ. ಈತನನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿತ ಸುಶಾಂತ್ ಪೂಜಾರಿ ವಿರುದ್ಧ ಮಂಗಳೂರು ಊರ್ವಾ ಪೊಲೀಸ್ ಠಾಣೆ (ಅ.ಕ್ರ.202/2017 – ಕಲಂ 406, 420 ಐಪಿಸಿ), ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣೆ (ಅ.ಕ್ರ.132/2022 – ಕಲಂ 379 ಐಪಿಸಿ) ಹಾಗೂ ಮಹಾರಾಷ್ಟ್ರದ ಅರ್ನಾಲ್ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪದ ಪ್ರಕರಣಗಳು ಸೇರಿದಂತೆ ಇಮ್ಮೋರಲ್ ಟ್ರಾಫಿಕಿಂಗ್ ಆ್ಯಕ್ಟ್ ಮತ್ತು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ಮಂಗಳೂರು ನಗರ ಪೊಲೀಸ್‌ರು ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.


























