ಪುತ್ತೂರು: ಆನ್‌ಲೈನ್ ಇನ್ಸುರೆನ್ಸ್ ಹೆಸರಿನಲ್ಲಿ ವಂಚನೆ ನಡೆಸಿದ ಆರೋಪಿಯೊಬ್ಬನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿ ಯಶೋಧರ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಿವಿಧ ಮೊಬೈಲ್ ಸಂಖ್ಯಗಳಿಂದ ಕರೆ ಮಾಡಿ, ತಾನು ಇನ್ಸುರೆನ್ಸ್ ಕಂಪನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾನೆ. ಇನ್ಸುರೆನ್ಸ್ ಮಾಡಿಸಿಕೊಡುವುದಾಗಿ ಹೇಳಿ ಹಣ ಪಾವತಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಫಿರ್ಯಾದಿದಾರರು ನಿರಾಕರಿಸಿದ ಬಳಿಕ, ಇನ್ಸುರೆನ್ಸ್ ರದ್ದುಪಡಿಸುವುದಾಗಿ ಹೇಳಿ ಅವರ ಕ್ರೆಡಿಟ್ ಕಾರ್ಡ್ ಸಂಖ್ಯೆ ಹಾಗೂ OTP ಪಡೆದುಕೊಂಡಿದ್ದಾನೆ.
ನಂತರ ಫಿರ್ಯಾದಿದಾರರ ಕ್ರೆಡಿಟ್ ಕಾರ್ಡ್‌ನಿಂದ ₹2,37,036/- ಮೊತ್ತವನ್ನು ಬೇರೆ ಖಾತೆಗೆ ವರ್ಗಾಯಿಸಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 52/2025, ಉ/ಸೆ: 66(D) ಐಟಿ ಕಾಯ್ದೆ ಹಾಗೂ 318(4), 319(2) ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ವೇಳೆ ಮಹಾರಾಷ್ಟ್ರ ಮೂಲದ ಹಾಗೂ ಪ್ರಸ್ತುತ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ವಾಸಿಸುತ್ತಿರುವ ಅವಿನಾಶ್ ರಮೇಶ್ ಗೌಡ (24) ಎಂಬಾತನನ್ನು ಪೊಲೀಸರು ದಿನಾಂಕ 11-02-2026 ರಂದು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತರಿಂದ ಬರುವ ಕರೆಗಳಿಗೆ ಪ್ರತಿಕ್ರಿಯಿಸುವಾಗ ಜಾಗ್ರತೆ ವಹಿಸಬೇಕು ಹಾಗೂ ಯಾವುದೇ ಕಾರಣಕ್ಕೂ OTP ಅಥವಾ ಬ್ಯಾಂಕ್/ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಿದ್ದಾರೆ.


























